ಬೆಂಗಳೂರು, ಜು 02 (DaijiworldNews/MS): ಕಾಂಗ್ರೆಸ್ ಎಂದೂ ಅಧಿಕಾರಕ್ಕೆ ಬರುವುದಿಲ್ಲ. ಇದನ್ನು ಮುಸಲ್ಮಾನ ಬಾಂಧವರು ಅರ್ಥಮಾಡಿಕೊಳ್ಳದೆ ಇದ್ದರೆ ಸದಾ ನೀವು ಏಟು ತಿನ್ನುತ್ತಲೇ ಇರುತ್ತೀರಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಪ್ರಧಾನ ಕಚೇರಿ ಜೆ ಪಿ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, " ಕಾಂಗ್ರೆಸ್ ಇನ್ನು ಯಾವತ್ತೂ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. 2013ರಲ್ಲಿ ಬಿಜೆಪಿ ಮೂರು ಭಾಗವಾಗಿ ಒಡೆದು ಹೋಗಿತ್ತು. ಆದ್ದರಿಂದಲೇ ಆಗ ಕಾಂಗ್ರೆಸ್ ಗೆ ಅಧಿಕಾರ ಸಿಕ್ಕಿದ್ದು. ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಕಾಂಗ್ರೆಸ್ನಿಂದ ಎನ್ನುವುದನ್ನು ಮುಸಲ್ಮಾನರು ಅರಿಯಬೇಕು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಪಕ್ಷಗಳಿಗೆ ಇನ್ನು ರಾಜಕೀಯ ಭವಿಷ್ಯ ಎನ್ನುವುದನ್ನು ಇಲ್ಲ ಎಂಬುವುದನ್ನು ಇತ್ತೀಚೆಗೆ ನಡೆದ 5 ರಾಜ್ಯಗಳ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡಿನ ಫಲಿತಾಂಶ ರೂಪಿಸಿದ್ದು, ಇನ್ನೇನಿದ್ದರೂ ಅಧಿಕಾರ ಪ್ರಾದೇಶಿಕ ಪಕ್ಷಗಳದ್ದೇ ಎಂದು ಪುನರುಚ್ಛರಿಸಿದ್ದಾರೆ.
ಮುಂದಿನ ಚುನಾವಣೆಗೆ ಮುಖ್ಯಮಂತ್ರಿ ಪದವಿ ಯಾರಿಗೆ ಎನ್ನುವುದನ್ನೇ ಕಾಂಗ್ರೆಸ್ ಇನ್ನೂ ನಿರ್ಧಾರ ಮಾಡಲು ಒದ್ದಾಡುತ್ತಿದೆ. ಸದ್ಯ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ ಅಂದರೆ ಅದಕ್ಕೆ ಕಾರಣ ಕಾಂಗ್ರೆಸ್. ನನ್ನ ಮುಸಲ್ಮಾನ ಬಾಂಧವರು ಇದನ್ನು ಅರಿಯಬೇಕು. ಜೆಡಿಎಸ್ನಿಂದಾಗಿ ಬಿಜೆಪಿ ಅಧಿಕಾರ ಪಡೆಯಲಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ದೂರಿದರು.