ಬೆಂಗಳೂರು, ಜು 02 (DaijiworldNews/PY): "ಹಿರಿಯರಿಗೆ ನಮ್ಮ ಪಕ್ಷದಲ್ಲಿ ಅವಮಾನವಾಗುತ್ತಿದೆ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರ ನಡೆಗೆ ಸಚಿವ ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ಕೆಲವು ಬೆಳವಣಿಗೆಗಳಿಂದ ನೋವಾಗುತ್ತಿದೆ. ನಾವು ವೈಯುಕ್ತಿಕವಾಗಿ ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಸಿಸಿಬಿ ಪೊಲೀಸರು ನನ್ನ ಆಪ್ತ ಸಹಾಯಕನನ್ನು ಬಂಧಿಸಿರುವುದು ನನಗೆ ವೈಯುಕ್ತಿಕವಾಗಿ ನೋವಾಗಿದೆ. ಈ ವಿಚಾರವನ್ನು ಬಿ.ವೈ.ವಿಜಯೇಂದ್ರ ಅವರು ನನ್ನ ಗಮನಕ್ಕೆ ತಂದಿದ್ದಲ್ಲಿ ನಾನೇ ಸರಿಪಡಿಸುತ್ತಿದ್ದೆ" ಎಂದಿದ್ದಾರೆ.
"ಯಾರಿಗಾದರೂ ಸರ್ಕಾರಿ ಕೆಲಸ ಕೊಡಿಸುವ, ಅಧಿಕಾರಿಗಳ ವರ್ಗಾವಣೆ ಅಥವಾ ಸಿಎಂ ಕಚೇರಿ ಹೆಸರು ಬಳಸಿಕೊಂಡ ದುರ್ಬಳಕೆ ಮಾಡಿರುವ ನಿರ್ದೇಶನಗಳಿದ್ದರೆ ನನ್ನ ಗಮನಕ್ಕೆ ತರುತ್ತಿದ್ದಲ್ಲಿ ಖಂಡಿತವಾಗಿಯೂ ನಾನು ಕ್ರಮ ತೆಗೆದುಕೊಳ್ಳುತ್ತಿದೆ. ನನಗೆ ದೂರು ನೀಡುತ್ತಿರುವುದರ ವಿಚಾರವಾಗಿ ಅಸಮಾಧಾನವಿಲ್ಲ. ನನ್ನ ಆಪ್ತ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಲ್ಲಿ ಕೆಲಸದಿಂದ ತೆಗೆದುಹಾಕುತ್ತಿದೆ. ಏಕಾಏಕಿ ಈ ರೀತಿಯಾದ ಘಟನೆ ನಡೆದಿರುವುದರಿಂದ ನನ್ನ ಮನಸ್ಸಿಗೆ ನೋವುಂಟಾಗಿದೆ" ಎಂದು ತಿಳಿಸಿದ್ದಾರೆ.
"ಹೆಸರನ್ನು ಯಾರೊಬ್ಬರೂ ಕೂಡಾ ದುರ್ಬಳಕೆ ಮಾಡಿಕೊಳ್ಳಬಾರದು. ನಂಬಿಕೆ, ವಿಶ್ವಾಸದಿಂದ ನಾವು ಕೆಲವರನ್ನು ನೇಮಕ ಮಾಡಿಕೊಂಡಿರುತ್ತೇವೆ. ನಮ್ಮ ಹೆಸರಿಗೆ ಮಸಿ ಬಳಿಯುವ ಕಾರ್ಯವಾಗುತ್ತಿದೆ. ಈ ವಿಚಾರದ ಬಗ್ಗೆ ನಾನು ಸಿಎಂ ಅವರನ್ನು ಭೇಟಿ ಮಾಡಲಿದ್ದು, ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ನನಗೆ ರಾಜು ಆತ್ಮೀಯನಾಗಿದ್ದ. ಆದರೆ, ಆತನ ವಂಚನೆ ಬಗ್ಗೆ ಮಾಹಿತಿ ಇರಲಿಲ್ಲ" ಎಂದಿದ್ದಾರೆ.
"ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಈ ವೇಳೆ ನಾನು ಹೆಚ್ಚು ಮಾತನಾಡಲಾರೆ. ತನಿಖೆ ನಡೆದು ಸತ್ಯ ಹೊರಬರಲಿ. ವಿಜಯೇಂದ್ರ ಜೊತೆ ಪ್ರಕರಣಗ ಬ್ಗಗೆ ಮಾತನಾಡುತ್ತೇನೆ" ಎಂದು ಹೇಳಿದ್ದಾರೆ.
ಕೋಟ್ಯಂತರ ರೂಪಾಯಿ ಹಣವನ್ನು ಸಚಿವರ ಹೆಸರಲ್ಲಿ ವಸೂಲಿ ಮಾಡಿರುವ ಆರೋಪದ ಮೇಲೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.