ನವದೆಹಲಿ, ಜು.02 (DaijiworldNews/HR): ಭಾರತೀಯ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು, ವಿಶೇಷವಾಗಿ ಐಪಿಎಸ್ ಅಧಿಕಾರಿಗಳು ಪ್ರಚಾರಗಳಿಂದ ದೂರವೇ ಇರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು 72ನೇ ಐಪಿಎಸ್ ಬ್ಯಾಚ್ನ ಪ್ರೊಬೆಷನರಿ ಅವಧಿಯಲ್ಲಿರುವ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, "ಐಪಿಎಸ್ ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಿಂದ ದೂರವೇ ಇರಬೇಕು. ಪ್ರಚಾರಕ್ಕಾಗಿ ಕೆಲಸ ಮಾಡಬೇಡಿ. ಬಡವ, ದಲಿತ ಹಾಗೂ ಬುಡಕಟ್ಟು ಜನಾಂಗದವರ ಬಗ್ಗೆ ವಿಶೇಷ ಕಾಳಜಿ ಇರಲಿ ಎಂದು ಸಲಹೆ ನೀಡಿದ್ದು, ಪ್ರಚಾರದ ಹಂಬಲವು ಸೇವೆಗೆ ಅಡ್ಡಿಯಾಗುತ್ತದೆ ಎಂದಿದ್ದಾರೆ.
ಇನ್ನು ಪೊಲೀಸರ ವಿರುದ್ಧ ಯಾವುದೇ ಗಂಭೀರ ಕ್ರಮಗಳನ್ನ ಕೈಗೊಂಡಿಲ್ಲ ಎಂಬ ಆರೋಪವಿದ್ದು, ಪೊಲೀಸರು ಕೆಲಸದ ಕಡೆ ಮಾತ್ರ ಗಮನ ನೀಡುವಂತೆ ಆಗಬೇಕು. ಪೊಲೀಸರು ದೇಶದ ಕಾನೂನುಗಳನ್ನು ಅರ್ಥ ಮಾಡಿಕೊಂಡು ಸರಿಯಾದ ಹೆಜ್ಜೆ ಇಡಬೇಕು" ಎಂದು ಸಲಹೆ ನೀಡಿದ್ದಾರೆ.
ಪ್ರಸ್ತುತ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳಿಂದ ದೂರವಿರುವುದು ಕಷ್ಟವಾದರೂ, ಪೊಲೀಸ್ ಅಧಿಕಾರಿಗಳು ಅದರಿಂದ ದೂರವಿರಬೇಕು ಮತ್ತು ತಮ್ಮ ಕರ್ತವ್ಯಗಳತ್ತ ಗಮನ ಹರಿಸಬೇಕು. ಪೊಲೀಸ್ ಅಕಾಡೆಮಿಯಿಂದ ಹೊರಡುವ ಮೊದಲು, ನೀವು ಮಾಡಿದ ಕೆಲಸವನ್ನು ಪ್ರಚಾರಕ್ಕಾಗಿ ಮಾತ್ರ ಮಾಡಲಾಗಿದೆಯೇ ಎಂದು ಪ್ರತಿದಿನ ನಿಮ್ಮ ದಿನಚರಿಯಲ್ಲಿ ಟಿಪ್ಪಣಿ ನೀಡುತ್ತೀರಿ ಎಂದು ನೀವು ಎಲ್ಲರೂ ಪ್ರತಿಜ್ಞೆ ಮಾಡಬೇಕು" ಎಂದು ಹೇಳಿದ್ದಾರೆ.