ಬೆಂಗಳೂರು, ಜು 02 (DaijiworldNews/PY): "ಜೀವ ಹೋಗುತ್ತಿರುವ ವೇಳೆ ಕಾಂಗ್ರೆಸ್ ಮುಂದಿನ ಮುಖ್ಯಮಂತ್ರಿ ನಾನು ಎಂಬಂತೆ ಪೈಪೋಟಿ ನಡೆಸುತ್ತಿದ್ದಾರೆ. ಸಾಯುತ್ತಿರುವ ಕಾಂಗ್ರೆಸ್ ಅನ್ನು ಯಾರಿಂದಲೂ ಉಳಿಸಲು ಆಗದು" ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಮುಂದಿನ ಸಿಎಂ ಹೇಳಿಕೆ ವಿಚಾರದ ಬಗ್ಗೆ ಬೆಂಬಲಿಗರ, ಶಾಸಕರ ಬಾಯಿ ಮುಚ್ಚಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಯತ್ನಿಸುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಂದಾಗಿಲ್ಲ. ಇನ್ನು ಎಂ.ಬಿ.ಪಾಟೀಲ ಅವರು ನಾನು ಸನ್ಯಾಸಿಯಲ್ಲ ಎನ್ನುತ್ತಿದ್ದಾರೆ. ಜಿ.ಪರಮೇಶ್ವರ ಅವರು ನಾನು ದಲಿತ ಸಿಎಂ ಎಂದು ಹೇಳುತ್ತಿದ್ದಾರೆ. ತನ್ವೀರ್ ಸೇಠ್ ನಾನೂ ಸಿಎಂ ಅಭ್ಯರ್ಥಿ ಎನ್ನುತ್ತಿದ್ದಾರೆ. ಕೈ ಪಕ್ಷದಲ್ಲಿ ಭಾವಿ ಸಿಎಂ ವಿಚಾರವಾಗಿ ಬಡಿದಾಟ ಆರಂಭವಾಗಿದೆ" ಎಂದಿದ್ದಾರೆ.
"ಕಾಂಗ್ರೆಸ್ನಲ್ಲಿ ಜಾತಿಗೊಬ್ಬರಂತೆ 5 ಸಿಎಂಗಳನ್ನು ಘೋಷಿಸಿಕೊಂಡಿದ್ದು, ಈ ಮಟ್ಟಕ್ಕೆ ಕಾಂಗ್ರೆಸ್ ಪಕ್ಷ ಇಳಿಯಬಾರದು. ಸಿಎಂ ಸ್ಥಾನ ಕನಸೇ ಸರಿ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕುವ ಸ್ಥಿತಿ ಬಂದಿದೆ ಇಂದು. ರಾಜಸ್ಥಾನ ಹಾಗೂ ಪಂಜಾಬ್ನಲ್ಲಿ ಸರ್ಕಾರವಿರುವುದು ಬಿಟ್ಟರೆ, ಕರ್ನಾಟಕದಲ್ಲಿ ಗೆದ್ದಿದ್ದ 70ಕ್ಕೂ ಅಧಿಕ ಮಂದಿಯ ಪೈಕಿ ಕೆಲವು ಮಂದಿಯನ್ನು ಬಿಟ್ಟು ಹೋಗಿದ್ದಾರೆ. ಜೀವವೇ ಹೋಗುತ್ತಿರುವ ಈ ಸಮಯದಲ್ಲಿ ಸಿಎಂ ಸ್ಥಾನಕ್ಕಾಗಿ ಜಗಳ ಮಾಡುತ್ತಿದ್ದಾರೆ" ಎಂದಿದ್ದಾರೆ.