ಬೆಂಗಳೂರು, ಜು.02 (DaijiworldNews/HR): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ನಡೆದ ಸ್ಥಳಕ್ಕೆ ಸರ್ಕಾರದ ವತಿಯಿಂದ ಯಾರೂ ಬಂದಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದು, ದುರಂತ ಸಂಭವಿಸಿದಾಗ ಆ ಸ್ಥಳಕ್ಕೆ ಮೊದಲು ಭೇಟಿ ಕೊಟ್ಟಿದ್ದೇ ನಾನು. ನಾನು ಸರ್ಕಾರದ ಭಾಗವಲ್ಲವೇ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪ್ರಶ್ನಿಸಿದ್ದಾರೆ.
ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, "ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಸಂಭವಿಸಿದಾಗ ಮೊದಲು ಭೇಟಿ ನೀಡಿದ್ದು ನಾನು. ಬಳಿಕ ಸುರೇಶ್ ಕುಮಾರ್ ಭೇಟಿ ಕೊಟ್ಟಿದ್ದಾರೆ. ನಾವು ಹೋದರೆ ಸರ್ಕಾರ ಹೋದಂತೆ ಅಲ್ಲವೇ ? ನಾವೆಲ್ಲ ಸರ್ಕಾರದ ಭಾಗವಲ್ಲವೇ ? ಬೇರೆಯವರಿಂದ ಹೇಳಿಸಿಕೊಂಡು ಕೆಲಸ ಮಾಡಬೇಕಿಲ್ಲ. ನನಗೆ ಅಂತಹ ಅನಿವಾರ್ಯತೆ ಇಲ್ಲ" ಎಂದು ತಿರುಗೇಟು ನೀಡಿದ್ದಾರೆ.
ಇನ್ನು "ಕರ್ನಾಟಕದ ಹೊರತು ಪಡಿಸಿ ಬೇರೆ ರಾಜ್ಯದಲ್ಲಿ ನಡೆದ ಘಟನೆಗಳ ಬಗ್ಗೆ ನಾನು ಹೇಳಿಕೆಗಳನ್ನು ನೀಡಲ್ಲ. ಆದರೆ ಕಾರಿಡಾರ್ಗಳಲ್ಲಿ ಮಲಗಿಸಿ ಚಿಕಿತ್ಸೆ ಕೊಟ್ಟ ಉದಾಹರಣೆಗಳಿವೆ. ನಮ್ಮ ರಾಜ್ಯದಲ್ಲಿ ಆಗಿರೋ ಕೆಲಸಗಳ ಬಗ್ಗೆ ಹೆಮ್ಮೆ ಇರಲಿ" ಎಂದು ಹೇಳಿದ್ದಾರೆ.