ನವದೆಹಲಿ, ಜು 02 (DaijiworldNews/PY): ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ನೀಡುವ ನಿಟ್ಟಿನಲ್ಲಿ ಸಮುದಾಯಗಳನ್ನು ಇತರ ಹಿಂದುಳಿದ ವರ್ಗಗಳು ಎಂದು ಘೋಷಿಸುವ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿರುವ ಮೇ 5ರ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
"ಈ ಬಗ್ಗೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ರಾಷ್ಟ್ರಪತಿಗೆ ಮಾತ್ರ ಸಮುದಾಯಗಳನ್ನು ಹಿಂದುಳಿದವು ಎಂದು ತಿಳಿಸುವ ಅಧಿಕಾರ ಇರುವುದು" ಎಂದು ತಿಳಿಸಿದೆ.
ಮರಾಠಾ ಕೋಟಾವನ್ನು ರದ್ದುಪಡಿಸುವ ವೇಳೆ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ಅಧ್ಯಕ್ಷತೆಯ ಐವರು ನ್ಯಾಯಮೂರ್ತಿಗಳ ಪೀಠವು ಮೇ 5ರಂದು ನೀಡಿದ್ದ ತೀರ್ಪಿನಲ್ಲಿ ಸಂವಿಧಾನದ 102ನೇ ತಿದ್ದುಪಡಿಯ ಮಾನ್ಯತೆಯನ್ನು ಎತ್ತಿಹಿಡಿದಿದ್ದು, ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಹಕ್ಕು ಇದೆ ಎಂದು ತಿಳಿಸಿತ್ತು. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಗಳನ್ನು ಸಿದ್ದಪಡಿಸುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎಂದಿತ್ತು.