ಶ್ರೀನಗರ, ಜು.02 (DaijiworldNews/HR): ಕಳೆದ ಕೆಲವು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಡ್ರೋನ್ ಹಾರಾಟ ಸದ್ದು ಮಾಡುತ್ತಿದ್ದು, ವಾಯು ಪಡೆ ನಿಲ್ದಾಣದ ಮೇಲೆ ನಡೆದ ಡ್ರೋನ್ ದಾಳಿಯ ಬಳಿಕ ಅನೇಕ ಡ್ರೋನ್ಗಳು ಹಾರಾಟ ನಡೆಸುತ್ತಿರುವುದು ಪತ್ತೆಯಾಗುತ್ತಿದ್ದು, ಇದೀಗ ಭಾರತ- ಪಾಕಿಸ್ಥಾನ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಶುಕ್ರವಾರ ಮುಂಜಾನೆ ಡ್ರೋನ್ ಹಾರಾಟ ನಡೆಸಿರುವುದು ಪತ್ತೆಯಾಗಿದೆ.
ಮುಂಜಾನೆ 4.25ರ ಸುಮಾರಿಗೆ ಸಣ್ಣ ಹೆಕ್ಸಾಕಾಪ್ಟರ್ ಪಾಕಿಸ್ಥಾನ ಗಡಿಯಿಂದ ಭಾರತದೊಳಗೆ ಬರಲು ಪ್ರಯತ್ನ ನಡೆಸಿದ್ದು, ತಕ್ಷಣ ಎಚ್ಚೆತ್ತ ಭಾರತೀಯ ಯೋಧರು ಅದರತ್ತ ಕೆಲವು ಸುತ್ತುಗಳು ಗುಂಡು ಹಾರಿಸಿದ್ದಾರೆ.
ಇನ್ನು ಗುಂಡಿನ ದಾಳಿಯಿಂದಾಗಿ ಕೂಡಲೇ ಡ್ರೋನ್ ಹಿಂದೆ ತೆರಳಿದೆ ಎಂದು ಬಿಎಸ್ ಎಫ್ ಮೂಲಗಳು ತಿಳಿಸಿದೆ.
ಜಮ್ಮು ವಾಯು ಪಡೆ ನಿಲ್ದಾಣದಲ್ಲಿ ಕಳೆದ ಭಾನುವಾರ ನಡೆದ ದಾಳಿಯ ಬಳಿಕ ಸತತವಾಗಿ ಡ್ರೋನ್ ಪತ್ತೆಯಾಗುತ್ತಿದ್ದು ಇದುವರೆಗೆ ಒಟ್ಟು ಏಳು ಡ್ರೋನ್ ಗಳು ಪತ್ತೆಯಾಗಿದೆ.