ನವದೆಹಲಿ, ಜು 02 (DaijiworldNews/PY): "ಭಾರತ ತನ್ನ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಿದೆ ಹಾಗೂ ಕೊರೊನಾದ ಮೂರನೇ ಅಲೆ ನಿಭಾಯಿಸಲು ಸಿದ್ಧವಾಗಿದೆ" ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇಂಡಿಯಾ ಗ್ಲೋಬಲ್ ಫೋರಂನಲ್ಲಿ ಮಾತನಾಡಿದ ಅವರು, "ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವುದರೊಂದಿಗೆ ಸರ್ಕಾರದ ಯೋಜಿತ ಖಾಸಗೀಕರಣ್ಕೆ ಚಾಲನೆಯ ಪ್ರಕ್ರಿಯೆಯೂ ನಡೆಯುತ್ತಿದೆ" ಎಂದಿದ್ದಾರೆ.
"ಯಾರೂ ಕೂಡಾ ಮೂರನೇ ಅಲೆ ಬರಲಿ ಎಂದು ಬಯಸುವುದಿಲ್ಲ. ಆದರೆ, ನಾವು ಆ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ, ವೈದ್ಯಕೀಯ ಮೂಲಸೌಕರ್ಯಗಳ ಹೆಚ್ಚಳಕ್ಕೆ ಪ್ರಾಶಸ್ತ್ಯ ನೀಡಿದ್ದೇವೆ. ಎರಡು ಹಾಗೂ ಮೂರನೇ ನಗರಗಳಲ್ಲಿ ವೈದ್ಯಕೀಯ ಮೂಲಸೌಕರ್ಯ ಸುಧಾರಣೆಗೆ ವಿವಿಧ ಕ್ರಮಗಳನ್ನು ಘೋಷಿಸಿದ್ದೇವೆ" ಎಂದು ತಿಳಿಸಿದ್ದಾರೆ.
"ಜನಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಆಯಾ ಪ್ರದೇಶಗಳಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಿದ್ದು, ಉತ್ತಮ ವೇಗದಲ್ಲಿ ನಡೆಯುತ್ಯಿದೆ. ಮೂರನೇ ಅಲೆ ಬರಲಿ ಅಥವಾ ಬಾರದೇ ಇರಲಿ ನಮ್ಮ ವೈದ್ಯಕೀಯ ಮೂಲಸೌಕರ್ಯ ಸಜ್ಜಾಗಿದೆ" ಎಂದು ಹೇಳಿದ್ದಾರೆ.
ಕೊರೊನಾ ಪರಿಸ್ಥಿತಿ ಹಿನ್ನೆಲೆ ನಿರ್ಮಲಾ ಸೀತಾರಾಮನ್ ಅವರು ಕಳೆದ ವಾರ ಮತ್ತೊಂದು ಆರ್ಥಿಕ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದರು.