ಬೆಂಗಳೂರು, ಜು 02 (DaijiworldNews/PY): "ರಾಜ್ಯಕ್ಕೆ ಕೇರಳದಿಂದ ಆಗಮಿಸುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಅಥವಾ ಎರಡು ಡೋಸ್ ಪಡೆದಿದ್ದೇವೆ ಎನ್ನುವ ಲಸಿಕೆ ಪ್ರಮಾಣಪತ್ರ ಕಡ್ಡಾಯ ಮಾಡಲಾಗಿದೆ" ಎಂದು ಬಿಬಿಎಂಪಿ ಹೊರಡಿಸಿದ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ಪ್ರಾತಿನಿಧಿಕ ಚಿತ್ರ
ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರ ಹೊರಡಿಸಿರುವ ಆದೇಶದಲ್ಲಿ, "ಕೇರಳದ ಕೆಲ ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರವು ವರದಿಯಾಗಿದ್ದು, ರಾಜ್ಯಾದ್ಯಂತ ಜಾರಿಯಲ್ಲಿರುವ ವಿಶೇಷ ಕಣ್ಗಾವಲು ಕ್ರಮಗಳ ಮಧ್ಯೆ ಕೈಗೊಂಡ ಕ್ರಮದ ಹಿಂದಿನ ಕಾರಣವಾಗಿದೆ" ಎಂದು ತಿಳಿಸಿದೆ.
ಆದೇಶದ ಪ್ರಕಾರ, "ಆರ್ಟಿಪಿಸಿಆರ್ ನೆಗೆಟಿವ್ ವರದಿ 72 ಗಂಟೆಗಳಿಗಿಂತ ಹಳೆಯದಾಗಿರಬಾರದು ಹಾಗೂ ಲಸಿಕೆ ಪ್ರಮಾಣಪತ್ರವು ಕೊರೊನಾ ಲಸಿಕೆಯ ಎರಡೂ ಡೋಸ್ಗಳನ್ನು ನಿರ್ದಿಷ್ಟಪಡಿಸಿರಬೇಕು. ಬಸ್ ಸೇರಿದಂತೆ ಟ್ಯಾಕ್ಸಿ, ವಿಮಾನ, ರೈಲು ಹಾಗೂ ವೈಯುಕ್ತಿಕ ಸಾರಿಗೆಯ ಮೂಲಕ ಕರ್ನಾಟಕವನ್ನು ಪ್ರವೇಶಿಸುವ ಎಲ್ಲಾ ಪ್ರಯಾಣಿಕೆರಿಗೆ ಈ ನಿಯಮ ಅನ್ವಯಿಸುತ್ತದೆ" ಎಂದು ವಿವರಿಸಿದೆ.
ಕೇರಳದೊಂದಿಗೆ ಗಡಿಗಳನ್ನು ಹಂಚಿಕೊಳ್ಳುವ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಂದರೆ, ದಕ್ಷಿಣ ಕನ್ನಡ ಸೇರಿದಂತೆ ಕೊಡಗು, ಮೈಸೂರು ಹಾಗೂ ಚಾಮರಾಜನಗರ ನಿಯಮವನ್ನು ಜಾರಿಗೊಳಿಸಲು ಚೆಕ್ಪೋಸ್ಟ್ಗಳಲ್ಲಿ ಸಾಕಷ್ಟು ಸಿಬ್ಬಂದಿಗಳನ್ನು ನಿಯೋಜಿಸಲು ಸೂಚಿಸಲಾಗಿದೆ. ಚಾಲಕ, ಸಹಾಯಕ/ಕ್ಲೀನರ್ ಹಾಗೂ ಎಲ್ಲಾ ವಾಹನಗಳ ಪ್ರಯಾಣಿಕರು ಸೇರಿದಂತೆ ಎಲ್ಲರನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಕೇಳಲಾಗಿದೆ.
"ಬಸ್ಸಿನಲ್ಲಿ ಪ್ರಯಾಣಿಸುವವರಿಗೆ, ಆರ್ಟಿಪಿಸಿಆರ್ ಪ್ರಮಾಣಪತ್ರವು 72 ಗಂಟೆಗಳಿಗಿಂತ ಹಳೆಯದಾಗಿಲ್ಲವೇ ಎನ್ನುವುದನ್ನು ಪರಿಶೀಲಿಸಲು ನಿರ್ವಾಹಕರಿಗೆ ಉಸ್ತುವಾರಿ ನೀಡಲಾಗುವುದು" ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.