ನವದೆಹಲಿ, ಜು 02 (DaijiworldNews/MS): ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಕೆಸುವಿನ ಎಲೆಯಲ್ಲಿ ತಯಾರಿಸುವ ಪತ್ರೊಡೆ ಖ್ಯಾದವು ಈಗ ಕೇಂದ್ರ ಆಯುಷ್ ಸಚಿವಾಲಯದ ಆಯುಷ್ ವೈದ್ಯ ಪದ್ದತಿಯ ಸಾಂಪ್ರದಾಯಿಕ ಆಹಾರ ಎಂಬ ಹೆಗ್ಗಳಿಕೆ ಪಡೆದಿದೆ.
ಕೇಂದ್ರದ ಆಯುಷ್ ಸಚಿವಾಲಯ ತನ್ನ ವೆಬ್ ಸೈಟ್ ನಲ್ಲಿ ಇತ್ತೀಚೆಗೆ 26 ಬಗೆಯ ಸಾಂಪ್ರದಾಯಿಕ ಅಡುಗೆಗಳ ರೆಸಿಪಿಗಳನ್ನು ಪ್ರಕಟಿಸಿದೆ.
ಅಡುಗೆಯ ಚಿತ್ರ, ಬೇಕಾಗುವ ಸಾಮಗ್ರಿಗಳು, ತಯಾರಿಸುವ ವಿಧಾನ, ಅದರಿಂದ ಆರೋಗ್ಯಕ್ಕೆ ಆಗುವ ಲಾಭಗಳ ಕುರಿತು ಚಿತ್ರಸಹಿತ ವಿವರ ನೀಡಲಾಗಿದೆ.
ನಾರಿನ ಅಂಶ ಅಧಿಕ ಮಟ್ಟದಲ್ಲಿರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ಪತ್ರೊಡೆಯಲ್ಲಿರುವ ಕಬ್ಬಿಣದ ಅಂಶಹೆಚ್ಚಿರುವುದಲ್ಲದೇ, ಕೆಸುವಿನ ಎಲೆಯಲ್ಲಿ ಭರಪೂರ ವಿಟಮಿನ್ ಸಿ ಮತ್ತು ಬೀಟಾ ಕೆರೋಟಿನ್ ಇದೆ ಎಂದು ಉಲ್ಲೇಖಿಸಲಾಗಿದೆ.
ಕರ್ನಾಟಕ ಮಾತ್ರವಲ್ಲದೆ ಕೇರಳ, ಮಹಾರಾಷ್ಟ್ರ, ಗೋವಾ, ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಪತ್ರೊಡೆ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚಾಗಿ ಪತ್ರೊಡೆ ತಿಂಡಿ ತಯಾರಿಸಲಾಗುತ್ತದೆ.