ಬೆಂಗಳೂರು, ಜು 02 (DaijiworldNews/MS): ನನ್ನನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿದ್ದು 17 ಜನರಲ್ಲ. ದೇವರೇ ನನ್ನ ಜೀವ ಉಳಿಸಲು ಮೈತ್ರಿ ಸರ್ಕಾರದ ಅಧಿಕಾರದಿಂದ ಕೆಳಗೆ ಇಳಿಸಿದ್ದಾನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.
ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಗುರುವಾರ ಮಾತನಾಡಿದ ಎಚ್ಡಿಕೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಅಂದು ಶಾಸಕರಾಗಿದ್ದ 17 ಜನ ಕಾರಣ ಎನ್ನುತ್ತಾರೆ. ಅವರು ನನ್ನ ಜೀವ ಉಳಿಸಿದ ಪುಣ್ಯಾತ್ಮರು. ನನಗೆ ಅವರ ಬಗ್ಗೆ ಯಾವುದೇ ಬೇಜಾರಿಲ್ಲ.ನಾನು ಸಂತೋಷದಿಂದ ಅಧಿಕಾರ ಬಿಟ್ಟು ಹೊರಗೆ ಬಂದೆ. ಈ ಸಂದರ್ಭದಲ್ಲಿ ನನ್ನ ಜೀವ ಉಳಿಯಬೇಕು ಎಂದು ದೇವರೇ ತೆಗೆದುಕೊಂಡ ನಿರ್ಧಾರ ಅದು. ಆ 17 ಜನರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.
ಮುಂದುವರಿಸಿ ಮಾತನಾಡಿದ ಅವರು, "ಜೆಡಿಎಸ್ ೨ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಸಜ್ಜಾಗುತ್ತಿದ್ದೇವೆ. ಇನ್ನು ನಮ್ಮ ಆಟ ತೋರಿಸುತ್ತೇವೆ. ವಿಧಾನಮಂಡಲದ ಮುಂದಿನ ಅಧಿವೇಶನದ ವೇಳೆಗೆ ಈ ಸರ್ಕಾರದ ಹಲವು ಹಗರಣಗಳನ್ನು ಬಯಲಿಗೆ ಎಳೆಯುವೆ' ಎಂದ ಅವರು ಕಾಂಗ್ರೆಸ್ನವರೊಬ್ಬರು 2018ರ ಚುನಾವಣೆಯಲ್ಲಿ ಇದು ನನ್ನ ಕೊನೇ ಚುನಾವಣೆ ಎಂದಿದ್ದರು. ಈಗ ಅವರೇ ಮತ್ತೆ ಸಿಎಂ ಆಗಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಸಿದ್ದರಾಮಯ್ಯರ ಹೆಸರು ಹೇಳದೆ ಮಾತಿನಲ್ಲೇ "ಕುಮಾರಸ್ವಾಮಿ ಚಾಟಿ ಬೀಸಿದರು.