ಬೆಂಗಳೂರು, ಜು 01 (DaijiworldNews/PY): "ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾಂಗ್ರೆಸ್ ಕಾರಣ ಬದಲಾಗಿ ಜಾತ್ಯಾತೀತದ ವಾದದಿಂದ ಅಲ್ಲ" ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೆಂಡಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಮೈತ್ರಿ ಸರ್ಕಾರದ ಸಂದರ್ಭ ಸಿಎಂ ಸ್ಥಾನದಿಂದ ನನ್ನನ್ನು ಕೆಳಗಿಳಿಸಿದ್ದು ಆ 17 ಶಾಸಕರಲ್ಲ. ನನ್ನನ್ನು ಆ ದೇವರೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಈ ರೀತಿಯ ಸರ್ಕಾರದಲ್ಲಿ ಇರುವುದು ಬೇಡ ಎಂದು ಕಾಪಾಡಿದ್ದಾನೆ. ಹಾಗಾಗಿ ನನಗೆ ಆ 17 ಶಾಸಕರ ಯಾವ ಬೇಸರವೂ ಇಲ್ಲ" ಎಂದಿದ್ದಾರೆ.
"ರಾಜ್ಯದಲ್ಲಿ ಜೆಡಿಎಸ್ ಪಕ್ಷವೇ ಇಲ್ಲ, ಜೆಡಿಎಸ್ ಅನ್ನು ಮುಗಿಸಿದ್ದೇವೆ ಎನ್ನುವ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಅಧಿವೇಶನ ಕರೆಯಲಿ ಆ ವೇಳೆ ಜೆಡಿಎಸ್ ಏನೆನ್ನುವುದನ್ನು ತೋರಿಸುತ್ತೇವೆ. ಇನ್ನು ಮುಂದೆ ಜೆಡಿಎಸ್ ಆಟ ಆರಂಭವಾಗಲಿದೆ" ಎಂದು ಹೇಳಿದ್ದಾರೆ.
"ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಈಗಲೇ ಸಿಎಂ ಖುರ್ಚಿಗೆ ಪೈಪೋಟಿ ಶುರುವಾಗಿದೆ. ಕಾಂಗ್ರೆಸ್ನಲ್ಲಿ ಎಲ್ಲರೂ ಸಿಎಂ ಆಗಲು ತಯಾರಿದ್ದಾರೆ. ಕಾಂಗ್ರೆಸ್ನ ಎಂಟು ಮಂದಿ ಈಗಲೇ ಸೂಟು ಹೊಲಿಸಿ ಸಿಎಂ ಸ್ಥಾನಕ್ಕಾಗಿ ತಯಾರಿ ನಡೆಸಿದ್ದಾರೆ. 2023ರವರೆಗೆ ಚುನಾವಣೆಗೆ ಸಮಯವಿದ್ದು, ಈಗಲೇ ಸಿಎಂ ಸ್ಥಾನದ ಬಗ್ಗೆ ಚರ್ಚೆ ನಡೆಸುತ್ತಿರುವುದು ಹಾಸ್ಯಾಸ್ಪದ" ಎಂದು ವ್ಯಂಗ್ಯವಾಡಿದ್ದಾರೆ.