ಕಾನ್ಪುರ, ಜು 01 (DaijiworldNews/PY): ಉತ್ತರಪ್ರದೇಶದ ಬಪ್ಪಿ ಲಹರಿ ಎಂದೇ ಖ್ಯಾತರಾದ ಕಾನ್ಪುರದ ಮನೋಜ್ ಸೆಂಗಾರ್ ಅಕಾ, ಮನೋಜಾನಂದ ಮಹಾರಾಜ್ ಅವರು ತಮಗಾಗಿ 5 ಲಕ್ಷ ರೂ. ಮೌಲ್ಯದ ಚಿನ್ನದ ಮಾಸ್ಕ್ವೊಂದನ್ನು ತಯಾರಿಸಿಕೊಂಡಿದ್ದಾರೆ.
ಚಿನ್ನದ ಮೇಲೆ ಹೆಚ್ಚು ಮೋಹ ಇರುವ ಮನೋಜಾನಂದ ಮಹಾರಾಜ್ ಅವರ ಬಳಿ ಎರಡು ಕಿಲೋಗ್ರಾಂ ತೂಗುವ ಚಿನ್ನಾಭರಣಗಳ ಸಂಗ್ರಹವಿದ್ದು, ಇದರಿಂದ ಅವರನ್ನು ಗೋಲ್ಡನ್ ಬಾಬಾ ಎಂದು ಕರೆಯುತ್ತಾರೆ. ಇದೀಗ ಅವರು ಚಿನ್ನದ ಮಾಸ್ಕ್ವೊಂದನ್ನು ತಯಾರಿಸಿಕೊಂಡಿದ್ದು, ಸಕತ್ ಫೇಮಸ್ ಆಗಿದ್ದಾರೆ.
ಈ ಮಾಸ್ಕ್ನ ವಿಶೇಷತೆ ಎಂದರೆ, ಈ ಮಾಸ್ಕ್ನಲ್ಲಿ ಸ್ಯಾನಿಟೈಸರ್ ದ್ರಾವಣವಿದೆ. ಅದು 36 ತಿಂಗಳು ಕೆಲಸ ಮಾಡುತ್ತದೆ. ಈ ಮಾಸ್ಕ್ ಬೆಲೆ 5 ಲಕ್ಷ ರೂ. ಆಗಿದ್ದು, ಇದಕ್ಕೆ ಶಿವ್ ಶರಣ್ ಎಂದು ಹೆಸರಿಸಿದ್ದಾರೆ.
250 ಗ್ರಾಂ ತೂಗುವ ನಾಲ್ಕು ಚಿನ್ನದ ಸರಗಳು, ಕಾಂಚ್ ಕವಚ, ಮೀನು ಹಾಗೂ ಆಂಜನೇಯ ಲಾಕೆಟ್ ಸದಾ ಇವರ ಬಳಿ ಇರುತ್ತದೆ. ಇವ ಮೈಮೇಲೆ ಸದಾ ಚಿನ್ನದ ರಾಶಿಯೇ ಇರುತ್ತದೆ.
ಇದಲ್ಲದೇ, ಇವರು ಒಂದು ಜೋಡಿ ಚಿನ್ನದ ಕಿವಿಯೋಲೆ, ರಿವಾಲ್ವರ್ಗೆ ಚಿನ್ನದ ಹೊದಿಕೆ ಹಾಗೂ ಮೂರು ಚಿನ್ನದ ಬೆಲ್ಟ್ಗಳನ್ನು ಖರೀದಿ ಮಾಡಿದ್ದಾರೆ.
"ನನ್ನ ಭದ್ರತೆಗಾಗಿ ನಾನು ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದು ಹಾಗೂ ನನ್ನ ರಕ್ಷಣೆಗೆ ಇಬ್ಬರು ಸಶಸ್ತ್ರ ಅಂಗರಕ್ಷಕರು" ಇದ್ದಾರೆ ಎಂದು ತಿಳಿಸಿದ್ದಾರೆ.