ನವದೆಹಲಿ, ಜು. 01(DaijiworldNews/HR): ಕೊರೊನಾ ಸಮಯದಲ್ಲಿ ವೈದ್ಯರು ದೇವರಂತೆ ಕೆಲಸ ಮಾಡಿದ್ದಾರೆ, ಅವರು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುತ್ತಾರೆ ಎಂದು ರಾಷ್ಟ್ರೀಯ ವೈದ್ಯರ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೈದ್ಯಕೀಯ ಭ್ರಾತೃತ್ವವನ್ನುದ್ದೇಶಿಸಿ ಮಾತನಾಡಿದರು.
ಈ ಕುರಿತು ವಾಸ್ತವಿಕ ಭಾಷಣದಲ್ಲಿ ಮಾತನಾಡಿದ ಅವರು, "ನಾನು ಭಾರತದ ಎಲ್ಲಾ 1.3 ಬಿಲಿಯನ್ ಜನರ ಪರವಾಗಿ ದೇಶದ ಎಲ್ಲಾ ವೈದ್ಯರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ನಮ್ಮ ವೈದ್ಯರು ದೇವರಂತೆ ಕೆಲಸ ಮಾಡಿ ನಮ್ಮ ಜೀವನದ ದಿಕ್ಕನ್ನು ಬದಲಾಯಿಸುತ್ತಾರೆ. ಕೊರೊನಾ ಸಮಯದಲ್ಲಿ ಅನೇಕ ವೈದ್ಯರು ತಮ್ಮ ಜೀವನವನ್ನ ಕಳೆದುಕೊಂಡಿದ್ದು, ಅವರ ಕುಟುಂಬಗಳಿಗೆ ನನ್ನ ಗೌರವಗಳನ್ನು ಸಲ್ಲಿಸಲು ನಾನು ಬಯಸುತ್ತೇನೆ" ಎಂದರು.
ಇನ್ನು ಕೊರೊನಾ ವಿರುದ್ಧ ಹೋರಾಡುವಲ್ಲಿ ವೈದ್ಯಕೀಯ ಸಮುದಾಯವು ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ, ವೈದ್ಯರು ಮತ್ತು ಇತರ ವೈದ್ಯಕೀಯ ವೃತ್ತಿಪರರನ್ನು ಶ್ಲಾಘಿಸಿದ ಪ್ರಧಾನಿ, "ದೇಶಾದ್ಯಂತ ಎರಡನೇ ಅಲೆಯ ಕೊರೊನಾ ವೈರಸ್ ಸಮಯದಲ್ಲಿ ಭಾರತ 798 ವೈದ್ಯರನ್ನು ಕಳೆದುಕೊಂಡಿದ್ದು, ದೆಹಲಿಯಲ್ಲಿ ಗರಿಷ್ಠ 128 ವೈದ್ಯರು ಸತ್ತಿದ್ದಾರೆ. ನಂತರ ಬಿಹಾರದಲ್ಲಿ 115 ವೈದ್ಯರು ಮೃತಪಟ್ಟಿದ್ದಾರೆ" ಎಂದು ತಿಳಿಸಿದರು.