ಬೆಂಗಳೂರು, ಜು 01 (DaijiworldNews/PY): "ಕೊರೊನಾ ವಿರುದ್ದದ ಹೋರಾಟದಲ್ಲಿ ಹುತಾತ್ಮರಾದ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಗಳ ಸ್ಮರಣಾರ್ಥ ಬೆಂಗಳೂರಿನಲ್ಲಿ ಗ್ರ್ಯಾಂಡ್ ಕೊರೊನಾ ವಾರಿಯರ್ ಸ್ಮಾರಕ ನಿರ್ಮಿಸಲಾಗುವುದು" ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ರಾಷ್ಟ್ರೀಯ ವೈದ್ಯರ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿದ ಅವರು, "ಕೊರೊನಾದಿಂದ ಮೃತಪಟ್ಟ ವೈದ್ಯರಿಗೆ ಗೌರವ ಸಲ್ಲಿಸಲು ನಮ್ಮ ಆರೋಗ್ಯ ಸೌಧಾ ಆವರಣದಲ್ಲಿ ನಾವು ಸ್ಮಾರಕವನ್ನು ನಿರ್ಮಿಸುತ್ತೇವೆ. ಇದು ದೇಶದ ಮೊದಲ ಸ್ಮಾರಕ ಎಂದು ನಾನು ನಂಬುತ್ತೇನೆ. ವೈದ್ಯರು ಹಾಗೂ ಅರೆವೈದ್ಯರ ನೆನಪಿಗಾಗಿ ಇದನ್ನು ಅನನ್ಯ ರೀತಿಯಲ್ಲಿ ನಿರ್ಮಾಣ ಮಾಡುವುದಾಗಿ ತಮ್ಮ ಇಲಾಖೆ ತೀರ್ಮಾನಿಸಿದೆ. ನವದೆಹಲಿಯಲ್ಲಿರುವ ಯುದ್ದ ಸ್ಮಾರಕಕ್ಕೆ ಇದು ಸಮನಾಗಿದ್ದು, ಸ್ಮಾರಕಕ್ಕೆ ಎಲ್ಲರೂ ಬಂದು ಗೌರವ ಸಲ್ಲಿಸುವ ಸ್ಥಳವಾಗಲಿದೆ" ಎಂದಿದ್ದಾರೆ.
"ವೈದ್ಯರನ್ನು ಪ್ರಧಾನಿ ಮೋದಿ ಅವರು ಕೊರೊನಾ ಯೋಧರು ಎಂದು ಕರೆದಿದ್ದರು. ಯುದ್ದದ ಸಂದರ್ಭ ರಾಷ್ಟ್ರಕ್ಕಾಗಿ ಪ್ರಾಣ ನೀಡುವ ಸೈನಿಕರನ್ನು ಮಾತ್ರವೇ ನಾವು ಹುತಾತ್ಮರೆದು ಕರೆಯುತ್ತೇವೆ. ಆದರೆ, ಕೊರೊನಾದಿಂದ ಮೃತಪಟ್ಟ ವೈದ್ಯರು ಹಾಗೂ ಅರೆವೈದ್ಯರು ಹುತಾತ್ಮರಾಗಿದ್ದಾರೆ ಎಂದು ಇಂದು ನಾವು ಘೋಷಣೆ ಮಾಡುತ್ತಿದ್ದೇವೆ ಹಾಗೂ ಅವರ ನೆನಪಿಗಾಗಿ ಸ್ಮಾರಕ ನಿರ್ಮಿಸುತ್ತೇವೆ. ರಚನೆಯ ಸ್ಕೆಚ್ ಮುಂದಿನ ವಾರಗಳಲ್ಲಿ ಸಿದ್ದವಾಗಲಿದ್ದು, ರಚನೆ ಸಿದ್ದವಾದ ಬಳಿಕ ಹುತಾತ್ಮರ ಕುಟುಂಬದ ಸದಸ್ಯರಿಗೆ ಗೌರವ ಸಲ್ಲಿಸಲು ಆಹ್ವಾನಿಸಲಾಗುತ್ತದೆ" ಎಂದು ಹೇಳಿದ್ದಾರೆ.
"ವೈದ್ಯರ ಹುತಾತ್ಮ ದಿನವನ್ನು ಆಚರಿಸಲು ತಮ್ಮ ಇಲಾಖೆ ದಿನಾಂಕ ನಿಗದಿಪಡಿಸಲಿದೆ" ಎಂದಿದ್ದಾರೆ.