ರಾಯ್ಪುರ, ಜು 01 (DaijiworldNews/PY): "ಬಸ್ತಾರ್ ಜಿಲ್ಲೆಯ ಅರಣ್ಯದಲ್ಲಿ ನಕ್ಸಲ್ ಹಾಗೂ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್ ಮೃತಪಟ್ಟಿದ್ದಾನೆ" ಎಂದು ಪೊಲೀಸರು ಹೇಳಿದ್ದಾರೆ.
ಪ್ರಾತಿನಿಧಿಕ ಚಿತ್ರ
ಮೃತ ನಕ್ಸಲ್ನನ್ನು ಪ್ಲಟೂನ್ ನಂ. 26ರ ವಿಭಾಗದ ಕಮಾಂಡರ್ ಮಾಡ್ವಿ ಜೋಗಾ ಎಂದು ಗುರುತಿಸಲಾಗಿದೆ.
"ರಾಯ್ಪುರದಿಂದ 300 ಕಿ.ಮೀ ದೂರದಲ್ಲಿರುವ ದರ್ಭಾ ಪೊಲೀಸ್ ಠಾಣೆ ವ್ಯಾಪ್ತಿಯ ಎಲಂಗಾನಾರ್ ಗ್ರಾಮದ ಸಮೀಪದ ಕಾಡಿನಲ್ಲಿ ಬುಧವಾರ ರಾತ್ರಿ ಗುಂಡಿನ ಚಕಮಕಿ ನಡೆದಿದ್ದು, ಜಿಲ್ಲಾ ಮೀಸಲು ಕಾವಲು ಪಡೆ (ಡಿಆರ್ಜಿ) ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ನಕ್ಸಲ್ನನ್ನು ಸದೆಬಡಿಯಲಾಗಿದೆ" ಎಂದು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಸುಂದರರಾಜ್ ಪಿ ಮಾಹಿತಿ ನೀಡಿದ್ದಾರೆ.
"ಬಸ್ತಾರ್ನ ಚಂದಮೆಟಾ ಪ್ರದೇಶದಲ್ಲಿ ಜೂನ್ 18ರಂದು ಭದ್ರತಾ ಪಡೆ ಹಾಗೂ ನಕ್ಸಲ್ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಳು. ಗುಂಡಿನ ಚಕಮಕಿಯಲ್ಲಿ ಕೆಲವು ನಕ್ಸಲರಿಗೆ ಗಾಯಗಳಾಗಿದ್ದು, ಆದರೆ, ಅವರು ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಅಂದಿನಿಂದ ಭದ್ರತಾ ಪಡೆಗಳು ಅವರನ್ನು ಪತ್ತೆಹಚ್ಚಲು ಯತ್ನಿಸುತ್ತಿದೆ" ಎಂದಿದ್ದಾರೆ.
"ಸ್ಥಳದಿಂದ ಒಂದು ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಎನ್ಕೌಂಟರ್ನಲ್ಲಿ ಪುರುಷ ನಕ್ಸಲ್ ಶವ ಪತ್ತೆಯಾಗಿದೆ" ಎಂದು ಹೇಳಿದ್ದಾರೆ.
ಮೃತ ನಕ್ಸಲ್ನ ತಲೆಗೆ 3 ಲಕ್ಷ. ರೂ ಬಹುಮಾನ ಘೋಷಣೆ ಮಾಡಲಾಗಿತ್ತು.