ಬೆಂಗಳೂರು, ಜು 01 (DaijiworldNews/PY): "ನಮ್ಮ ಬಳಿ ಹೆಣದ ರಾಶಿಯ ಫೋಟೋಗಳು ಇವೆ. ಆದರೆ, ನಾನು ಯಾವುದನ್ನೂ ಪ್ರದರ್ಶಿಸಲು ಹೋಗುವುದಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೊರೊನಾದಿಂದ ಸಾವನ್ನಪ್ಪಿದವರ ಮನೆಗೆ ಓರ್ವ ಸಚಿವರೂ ಭೇಟಿ ನೀಡಿಲ್ಲ, ಸಾಂತ್ವಾನ ಹೇಳಿಲ್ಲ. ಇದು ಹತ್ಯೆಯೋ ಅಥವಾ ಆಕಸ್ಮಿಕವೋ ಎನ್ನುವ ಬಗ್ಗೆ ಮಾತನಾಡುವುದು ಬೇಡ. ಆಸ್ಪತ್ರೆಯಲ್ಲಿ ತಾಯಿಯ ಮಡಿಲಲ್ಲೇ ಮಗ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯಲ್ಲಿ ರಾತ್ರಿ ಪಾಳಿಗೆ ವೈದ್ಯರೇ ಇಲ್ಲ. ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್ಗಳ ಕೊರತೆ ಇದೆ ಎಂದು ರಾಜ್ಯ ಸರ್ಕಾರದ ವಿರುದ್ದ" ಕಿಡಿಕಾರಿದ್ದಾರೆ.
ಆಸ್ಪತ್ರೆಯ ಒಂದು ಕೊಠಡಿಯಲ್ಲಿ ಸುಮಾರು 14-15 ಮಂದಿ ಸೋಂಕಿತರನ್ನು ತುಂಬಿದ್ದಾರೆ. ಹಲವಾರು ರೋಗಿಗಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅವರು ಸಾವನ್ನಪ್ಪಿದ ಕೂಡಲೇ ಮತ್ತೆ ರೋಗಿಗಳನ್ನು ತುಂಬುತ್ತಾರೆ. ನಮ್ಮ ಬಳಿ ಹೆಣದ ರಾಶಿಯ ಫೋಟೋಗಳು ಇವೆ. ಆದರೆ, ಯಾವುದನ್ನೂ ಪ್ರದರ್ಶಿಸಲು ಹೋಗುವುದಿಲ್ಲ ಎಂದಿದ್ದಾರೆ.
ಚಾಮರಾಜನಗರದಲ್ಲಿ ಸಂಭವಿಸಿದ ಆಕ್ಸಿಜನ್ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ 36 ಕುಟುಂಬಗಳ ಪೈಕಿ 28 ಕುಟುಂಬಗಳನ್ನು ಭೇಟಿ ಮಾಡಿದ್ದು, ಅವರು ಬೆಂಗಳೂರಿಗೆ ಮರಳಿದ್ದಾರೆ. ಬಿಜೆಪಿ ಸರ್ಕಾರ ನಿರ್ಲಕ್ಷ್ಯದ ಕಾರಣ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಯಿತು" ಎಂದು ಹೇಳಿದ್ದಾರೆ.
"ಸರ್ಕಾರ ಮೊದಲು ವಿಧಾನಮಂಡಲ ಅಧಿವೇಶನ ಕರೆಯಬೇಕು. ಅಧಿವೇಶದಲ್ಲಿ ಪ್ರತಿಯೊಂದ ವಿಚಾರದ ಬಗ್ಗೆ ಮಾತನಾಡುತ್ತೇನೆ. ಜಿಲ್ಲಾಸ್ಪತ್ರೆಯಲ್ಲಿಯೇ ಈ ರೀತಿಯಾದ ಅವಘಡ ಸಂಭವಿಸಿದರೆ ಹೇಗೆ?" ಎಂದು ಪ್ರಶ್ನಿಸಿದ್ದಾರೆ.