ಬೆಂಗಳೂರು, ಜು 01 (DaijiworldNews/MS): ವೈದ್ಯಕೀಯ ಪದವಿ ಪೂರೈಸಿದ ಅಭ್ಯರ್ಥಿಗಳಿಂದ ಕಡ್ಡಾಯ ಗ್ರಾಮೀಣ ಸೇವೆಗಾಗಿ ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳುವಂತೆ ಕರ್ನಾಟಕ ಸರ್ಕಾರ ಒತ್ತಾಯಿಸಬಾರದು ಎಂದು ರಾಜ್ಯ ಹೈಕೋರ್ಟ್ ಎರಡು ವಾರಗಳ ಕಾಲ ನಿರ್ಬಂಧ ವಿಧಿಸಿದೆ.
ಸರ್ಕಾರ ಎರಡು ವಾರಗಳ ವರೆಗೆ ಪ್ರಕರಣದ ಬಗ್ಗೆ ತುರ್ತು ನಿರ್ಧಾರ ತೆಗೆದುಕೊಳ್ಳಬಾರದು ಎಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ತಮ್ಮ ಮಧ್ಯಂತರ ಆದೇಶದಲ್ಲಿ ಸೂಚಿಸಿದರು.
“ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು ಇನ್ನೂ ತಮ್ಮ ವಾದ ಪೂರ್ಣಗೊಳಿಸಬೇಕಿರುವುದರಿಂದ ಮತ್ತು ನ್ಯಾಯಾಲಯ ಅರ್ಜಿದಾರರ ಪರ ವಕೀಲರ ವಾದ ಆಲಿಸಬೇಕಿರುವುದರಿಂದ ಮೊದಲ ಪ್ರತಿವಾದಿ- ರಾಜ್ಯ ಸರ್ಕಾರ ಕೇವಲ ಎರಡು ವಾರಗಳ ಅವಧಿಗೆ ಅನುಬಂಧ- ಎ ಪ್ರಕಾರ ಆಕ್ಷೇಪಾರ್ಹ ಅಧಿಸೂಚನೆ ಅನುಸರಿಸಿ ತ್ವರಿತ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸೂಚಿಸಲಾಗಿದೆ” ಎಂಬುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಅರ್ಜಿದಾರರಿಗೆ ಮಾತ್ರ ಈ ಆದೇಶ ಅನ್ವಯವಾಗಲಿದ್ದು ಉಳಿದವರಿಗೆ ಅಲ್ಲ ಎಂದು ಕೂಡ ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ. ಆದರೂ, ಅನುಬಂಧ- ಎ ಪ್ರಕಾರ ಅಧಿಸೂಚನೆಯನ್ನು ಅನುಷ್ಠಾನಗೊಳಿಸಲು ಪ್ರತಿವಾದಿ-ರಾಜ್ಯ ಸರ್ಕಾರ ಮುಕ್ತವಾಗಿದೆ” ಎಂದು ಅದು ಹೇಳಿದೆ.
ರಾಜ್ಯ ಸರ್ಕಾರ ಕಡ್ಡಾಯ ಸೇವೆ ಕಾಯ್ದೆಯನ್ನು 2012ರಲ್ಲಿ ಜಾರಿ ಮಾಡಿದೆ. ಸರ್ಕಾರಿ ಸೀಟು ಪಡೆದ ಮತ್ತು 2021ರ ಶೈಕ್ಷಣಿಕ ಸಾಲಿನಲ್ಲಿ ಎಂಬಿಬಿಎಸ್ ಪೂರೈಸಿದವರು ಕಡ್ಡಾಯ ಗ್ರಾಮೀಣ ಸೇವೆಗಾಗಿ ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳುವಂತೆ ಸರ್ಕಾರ ಜೂನ್ 8 ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.