ಬೆಂಗಳೂರು, ಜು. 01(DaijiworldNews/HR): ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಜಾತಿಗೊಬ್ಬರಂತೆ ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದಾರೆ. ಆದರೆ ಈ ಜನ್ಮದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ" ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್, ಎಂ.ಬಿ.ಪಾಟೀಲ್, ತನ್ವೀರ್ ಸೇಠ್ ಸೇರಿದಂತೆ ಅನೇಕರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ ಕಾಂಗ್ರೆಸ್ ದೇಶದಲ್ಲಿ ಎಲ್ಲಿದೆ ಎಂದು ಹುಡುಕುವಂತಾಗಿದೆ" ಎಂದಿದ್ದಾರೆ.
"ಮುಖ್ಯಮಂತ್ರಿ ಯಡಿಯೂರಪ್ಪ ವರಿಷ್ಠರ ತೀರ್ಮಾನಕ್ಕೆ ಬದ್ದ ಎಂದು ಹೇಳಿದ್ದು, ರಮೇಶ್ ಜಾರಕಿಹೊಳಿ ಮನಸಿನ ಭಾವನೆ ಹೊರ ಹಾಕಿದ್ದಾರೆ. ಬಿಜೆಪಿಯಲ್ಲಿ ಹೇಳುವವರು ಕೇಳುವವರು ಇದ್ದಾರೆ. ಬಹಿರಂಗ ಹೇಳಿಕೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳಲು ಕೋರ್ ಕಮಿಟಿಯಲ್ಲಿ ಚರ್ಚಿಸಲಾಗಿದೆ" ಎಂದರು.
ಇನ್ನು "ಬಿಜೆಪಿಯಲ್ಲಿ ಯಾರಿಗೆ ಯಾವ ಸ್ಥಾನ ಎಂದು ವರಿಷ್ಠರು ತೀರ್ಮಾನ ಮಾಡುತ್ತಾರೆ" ಎಂದು ಈಶ್ವರಪ್ಪ ಹೇಳಿದ್ದಾರೆ.