ಚಿಕ್ಕಬಳ್ಳಾಪುರ, ಜು 01 (DaijiworldNews/MS): ನಟ ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಅವರ ಕಾರು ಅಪಘಾತವಾಗಿರುವ ಘಟನೆ ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಳಿ ನಡೆದಿದೆ.
ಬಿಎಂಡಬ್ಲ್ಯು ಕಾರನ್ನು ಖುದ್ದು ಜಗ್ಗೇಶ್ ಪುತ್ರ ಗುರುರಾಜ್ ಅವರೇ ಚಲಾಯಿಸುತ್ತಿದ್ದು, ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಏರ್ ಬ್ಯಾಗ್ ಓಪನ್ ಆಗಿದ್ದರಿಂದ ತೀವ್ರ ಪ್ರಮಾಣದ ಗಾಯಗಳು ಮತ್ತು ಪ್ರಾಣಾಪಾಯದಿಂದ ಗುರುರಾಜ್ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಗುರು ಅವರ ತಲೆ ಮತ್ತು ಕಾಲಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾರೆ. ಕಾರು ಮರಕ್ಕೆ ಡಿಕ್ಕಿ ಹೊಡೆದ ತೀವ್ರತೆಗೆ ಮುಂಭಾಗದ ಟೈರು ಸ್ಫೋಟಗೊಂಡಿದೆ.ಗುರುರಾಜ್ ಅವರು ಹೈದರಾಬಾದ್ ಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.