ಮುಂಬೈ, ಜು. 01(DaijiworldNews/HR): ಬಾಲಿವುಡ್ ಚಿತ್ರ ನಿರ್ಮಾಪಕ, ಟಿ-ಸೀರಿಸ್ ಮ್ಯೂಸಿಕ್ ಕಂಪೆನಿ ಮಾಲೀಕರಾಗಿದ್ದ ಗುಲ್ಶನ್ ಕುಮಾರ್ ಅವರ ಕೊಲೆ ಪ್ರಕರಣದ ಆರೋಪಿ ಅಬುಲ್ ರೌಫ್ ಮರ್ಚೆಂಟ್ ಅನ್ನು ತಪ್ಪಿತಸ್ಥನೆಂದು ಘೋಷಿಸಿದ್ದ ಸೆಷನ್ಸ್ ಕೋರ್ಟ್ ತೀರ್ಪನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದ್ದು, ಮತ್ತೊಬ್ಬ ಆರೋಪಿ ಅಬ್ದುಲ್ ರಷೀದ್ಅನ್ನು ಕೂಡ ಅಪರಾಧಿ ಎಂದು ತೀರ್ಪು ನೀಡಿದೆ.
ಗುಲ್ಶನ್ ಕುಮಾರ್ ಅವರನ್ನು ಉದ್ಯಮದಲ್ಲಿನ ದ್ವೇಷದಿಂದ ಹಿನ್ನಲೆಯಲ್ಲಿ ಕೊಲೆ ಮಾಡಿಸಿದ್ದರು ಎಂದು ಆರೋಪಿಸಲಾಗಿದ್ದ ಟಿಪ್ಸ್ ಇಂಡಸ್ಟ್ರೀಸ್ನ ಮಾಲೀಕ ರಮೇಶ್ ತೌರಾನಿ ಅವರ ಖುಲಾಸೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಇನ್ನು ಖುಲಾಸೆಗೊಳಿಸಿದ್ದ ಸೆಷನ್ಸ್ ಕೋರ್ಟ್ನ 2002 ರ ಏಪ್ರಿಲ್ 29 ರ ತೀರ್ಪಿನ ವಿರುದ್ಧ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದು, ಅಪರಾಧಿಗಳೆಂದು ಸಾಬೀತಾದ ದಾವೂದ್ ಇಬ್ರಾಹಿಂನ ಸಹಚರ ಎನ್ನಲಾದ ರೌಫ್ ಮರ್ಚೆಂಟ್ ಮತ್ತು ಅಬ್ದುಲ್ ರಶೀದ್ಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ.
ಗುಲ್ಶನ್ ಕುಮಾರ್ ಅವರಿಗೆ ಅಂಡರ್ವರ್ಲ್ಡ್ನಿಂದ ಜೀವ ಬೆದರಿಕೆ ಬಂದಿತ್ತು ಎನ್ನಲಾಗಿದ್ದು, ಆ ಬಳಿಕ 1997 ರ ಆಗಸ್ಟ್ 12 ರಂದು ಮುಂಬೈ ನಗರದ ಜುಹುನಲ್ಲಿ ದೇವಸ್ಥಾನದಿಂದ ಹೊರಬರುತ್ತಿದ್ದ ಕುಮಾರ್ ಅವರನ್ನು ಗುಂಡಿಕ್ಕಿ ಸಾಯಿಸಲಾಗಿತ್ತು. ರೌಫ್ ಮರ್ಚೆಂಟ್ ಮತ್ತು ಅಬ್ದುಲ್ ರಶೀದ್ 16 ಬುಲೆಟ್ಗಳನ್ನು ಹಾರಿಸಿದ್ದು, ಕುಮಾರ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು ಎನ್ನಲಾಗಿದೆ.