ಕೋಲ್ಕತ್ತಾ, ಜು 01 (DaijiworldNews/MS): ಪ್ರಧಾನಿ ನರೇಂದ್ರ ಮೋದಿಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೂ ಎಣ್ಣೆ ಸೀಗೇಕಾಯಿ ಸಂಬಂಧ ಎನ್ನುವುದು ದೇಶಕ್ಕೆ ಗೊತ್ತಿರುವ ಸಂಗತಿ. ದೀದಿಯನ್ನು ನೋಡಿದರೆ ಮೋದಿಗೆ ಏನಾಗುತ್ತದೋ? ಆದರೆ ಮೋದಿಯನ್ನು ಕಂಡರೆ ದೀದಿಗೆ ಆಗಿ ಬರುವುದಿಲ್ಲ. ರಾಜಕೀಯವೆಂದರೆ ಹಾಗೆಯೇ ನಿಸ್ಸಂದೇಹವಾಗಿ ಕಹಿ-ಸಿಹಿಯ ಹೂರಣ , ಹೇಳಿಕೆ ಆರೋಪ ಪ್ರತ್ಯಾರೋಪಗಳ ಆಗರ. ಆದರೆ ಬಹಳಷ್ಟು ವರ್ಷಗಳಿಂದ ರಾಜಕೀಯದಲ್ಲಿ ಮಾವಿಹಣ್ಣಿನನ್ನು ಪಕ್ಷಗಳ ನಡುವಿನ ಸಂಬಂಧಗಳನ್ನು ಸಿಹಿಗೊಳಿಸಲು ಬಳಸಲಾಗುತ್ತದೆ ಎನ್ನುವುದು ನಿಜ.
ಪ್ರಧಾನಿ ಮೋದಿ ಮೋದಿ- ಬಂಗಾಳ ಮುಖ್ಯಮಂತ್ರಿ ದೀದಿ ನಡುವೆ ನಡೆಯುತ್ತಿರುವ ಜಿದ್ದಾಜಿದ್ದಿನ ನಡುವೆಯೂ ಮಮತಾ ಪ್ರಧಾನಿಯವರಿಗಾಗಿ ರಸಭರಿತ ಮಾವಿನ ಹಣ್ಣುಗಳ ಉಡುಗೊರೆಯಾಗಿ ಕಳುಹಿಸಿ ಕೊಟ್ಟಿದ್ದಾರೆ.
ಹೌದು ಕಳೆದ ವಾರ ಬಂಗಾಳದ ಮಾವಿನ ಪ್ರಭೇದಗಳಾದ ಹಿಮ್ಸಾಗರ್, ಮಾಲ್ಡಾ ಮತ್ತು ಲಕ್ಷ್ಮನ್ಭೋಗ್ ಅನ್ನು ಪ್ರಧಾನಿ ಮೋದಿಗಾಗಿ ಕಳುಹಿಸಿಕೊಡಲಾಗಿದೆ. ಮೋದಿಗಷ್ಟೇ ಅಲ್ಲದೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಉಪರಾಷ್ಟ್ರಪತ್ ವಿ.ಪಿ.ಎಂ.ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಷಾ ಅವರಿಗೂ ಮಾವಿನಹಣ್ಣುಗಳನ್ನು ಕಳುಹಿಸಿ ಕೊಡಲಾಗಿದೆ. ಇವರಷ್ಟೇ ಅಲ್ಲದೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಮಾವಿನಹಣ್ಣನ್ನು ಕಳುಹಿಸಿದ್ದಾರೆ.
ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ, ನಾರದ ಹಗರಣ ಪ್ರಕರಣಗಳು, ಮುಖ್ಯ ಕಾರ್ಯದರ್ಶಿ ಬಂಡೋಪಾಧ್ಯಾಯರ ಹಠಾತ್ ವರ್ಗಾವಣೆ ಮತ್ತು ರಾಜ್ಯಪಾಲ ಜಗದೀಪ್ ಧಂಕರ್ ಪಶ್ಚಿಮ ಬಂಗಾಳ ರಾಜ್ಯಪಾಲ ಮತ್ತು ಟಿಎಂಸಿ ಸರ್ಕಾರದ ನಡುವಿನ ಸಂಘರ್ಷ ಇವೆಲ್ಲದರ ನಡುವೆಯೂ ಮಮತಾ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ 2011 ರಲ್ಲಿ ಪ್ರಾರಂಭಿಸಿದ ಮಾವಿನಹಣ್ಣು ಕಳುಹಿಸಿಕೊಡುವ ಸಂಪ್ರದಾಯ ಮುಂದುವರಿಸಿದ್ದಾರೆ.