ಮೈಸೂರು, ಜು 01 (DaijiworldNews/PY): "ಆಡಳಿತ ಪಕ್ಷಕ್ಕೆ ವಿರೋಧ ಪಕ್ಷವನ್ನು ಎದುರಿಸುವ ಭಯವಿದೆ. ಹಾಗಾಗಿ ಸರ್ಕಾರಕ್ಕೆ ಅಧಿವೇಶನ ಕರೆಯುತ್ತಿಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರಕ್ಕೆ ಅಧಿವೇಶನ ಕರೆಯಲು ಭಯವಿದೆ. ತಮ್ಮ ಬಣ್ಣ ಬಯಲಾಗುವ ಹೆದರಿಕೆ ಸರ್ಕಾರಕ್ಕಿದೆ. ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದಲ್ಲಿ ಅವರು ಅಧಿವೇಶನ ಕರೆಯಬೇಕು. ಈ ಬಗ್ಗೆ ನಾನು ಆಗ್ರಹಿಸುತ್ತೇನೆ. ತುರ್ತಾಗಿ ಮುಂಗಾರು ಅಧಿವೇಶನ ಕರೆಯಿರಿ" ಎಂದಿದ್ದಾರೆ.
"ರಾಜ್ಯದಲ್ಲಿ ತುರ್ತಾಗಿ ವಿಧಾನಸಭಾ ಅಧಿವೇಶನ ಕರೆಯಬೇಕು. ಇಂತಹ ತುರ್ತು ಸಮಯದಲ್ಲಿ ಅಧಿವೇಶನ ಕರೆಯದೇ ಇನ್ನು ಯಾವಾಗ ಕರೆಯುತ್ತಾರೆ?. ಆಡಳಿತ ಪಕ್ಷಕ್ಕೆ ವಿಪಕ್ಷವನ್ನು ಎದುರಿಸಲು ಭಯವಿದೆ. ಹಾಗಾಗಿ ಅಧಿವೇಶನ ಕರೆಯುತ್ತಿಲ್ಲ" ಎಂದು ಹೇಳಿದ್ದಾರೆ.
ಯೂತ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಗೊಂದಲ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ವಿಚಾರಕ್ಕೂ ನನಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಅದು ಪ್ರತ್ಯೇಕವಾದ ವ್ಯವಸ್ಥೆಯಾಗಿದ್ದು, ಆದರೂ ಕೂಡಾ ನಾನು ಅವರಿಗೆ ಸಲಹೆ ನೀಡಿದ್ದೇನೆ. ಪ್ರತ್ಯೇಕವಾದ ಚುನಾವಣೆಯಾದ ಬಳಿಕ ಅಧ್ಯಕ್ಷರ ನೇಮಕ ಅವರ ಆಯ್ಕೆ. ಹಾಗಾಗಿ ಹೊಂದಾಣಿಕೆಯಿಂದ ಒಬ್ಬರ ಆಯ್ಕೆ ಮಾಡಿ" ಎಂದಿದ್ದಾರೆ.
"ಯೂತ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪಾತ್ರ ಇಲ್ಲ. ಈ ಬಗ್ಗೆ ಸುಖಾ ಸುಮ್ಮನೆ ಗೊಂದಲ ಬೇಡ" ಎಂದು ತಿಳಿಸಿದ್ದಾರೆ.