ಬೆಂಗಳೂರು, ಜು. 01(DaijiworldNews/HR): ಕರ್ನಾಟಕದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗೊಂದಲಕ್ಕೆ ಅಂತ್ಯಹಾಡಲು ರಕ್ಷಾ ರಾಮಯ್ಯ ಮತ್ತು ಮೊಹಮ್ಮದ್ ನಲಪಾಡ್ ಮಧ್ಯೆ ಅಧಿಕಾರ ಹಂಚಿಕೆಗಾಗಿ ಸಂಧಾನ ಸೂತ್ರವೊಂದನ್ನು ಕಾಂಗ್ರೆಸ್ ಮುಂದಿಟ್ಟಿದ್ದು, ಜುಲೈ 4ರಂದು ಯುವ ಕಾಂಗ್ರೆಸ್ ಮತ್ತು ಕೆಪಿಸಿಸಿ ನಾಯಕರು ಸಭೆ ನಡೆಸಿ ತೀರ್ಮಾನಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ದೆಹಲಿಗೆ ತೆರಳಿದ್ದ ವೇಳೆ, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಷಯದಲ್ಲಿ ನಡೆಯುತ್ತಿರುವ ಹಗ್ಗಜಗ್ಗಾಟವನ್ನು ವರಿಷ್ಠರ ಗಮನಕ್ಕೆ ತಂದಿದ್ದು, ಈ ವೇಳೆ ಪರಸ್ಪರ ಸಂಧಾನದ ಮೂಲಕ ಸಮಸ್ಯೆ ಪರಿಹರಿಸುವಂತೆ ಹಿರಿಯ ನಾಯಕರು ಸಲಹೆ ನೀಡಿದ್ದರು ಎನ್ನಲಾಗಿದೆ.
ಇನ್ನು ಇದೇ ಕಾರಣಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಯುವ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಜಂಟಿ ಕಾರ್ಯದರ್ಶಿ ಕೃಷ್ಣ ಆಳ್ವಾರ್, ರಕ್ಷಾ ರಾಮಯ್ಯ ಮತ್ತು ಮೊಹಮ್ಮದ್ ನಲಪಾಡ್ ಜೊತೆ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದು, ಮಧ್ಯರಾತ್ರಿವರೆಗೆ ಸಭೆ ನಡೆದರೂ ಒಮ್ಮತ ಸಾಧ್ಯ ಆಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದೀಗ ಅಧ್ಯಕ್ಷರಾಗಿರುವ ರಕ್ಷಾ ರಾಮಯ್ಯ ಡಿ. 31ರವರೆಗಿನ ಆರು ತಿಂಗಳು ಅವಧಿಗೆ ಮಂದುವರಿಯಲಿದ್ದು, ಬಳಿಕ ಮೊಹಮ್ಮದ್ ನಲಪಾಡ್ಗೆ ಬಿಟ್ಟುಕೊಡಬೇಕು ಎಂಬ ಸೂತ್ರವನ್ನು ಡಿ.ಕೆ. ಶಿವಕುಮಾರ್ ಮುಂದಿಟ್ಟಿದ್ದು, ಇದಕ್ಕೆ ರಕ್ಷಾ ರಾಮಯ್ಯ ಒಪ್ಪಿಲ್ಲ. ಮುಂದಿನ ಒಟ್ಟು ಅವಧಿಯಲ್ಲಿ ಅರ್ಧದಷ್ಟು ಅವಧಿಗೆ ಕಾರ್ಯ ನಿರ್ವಹಿಸಲು ಅವಕಾಶ ಕೊಡಬೇಕು. ಈ ಅವಧಿಯಲ್ಲಿ ನಲಪಾಡ್ ಮಧ್ಯಪ್ರವೇಶಿಸಬಾರದು ಮತ್ತು ಅವರಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್ನಲ್ಲಿ ಸ್ಥಾನ ನೀಡಬೇಕು ಎಂಬ ಸಲಹೆಯನ್ನು ರಕ್ಷಾ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸಿದ್ದ ಮೊಹಮ್ಮದ್ ನಲಪಾಡ್ ಅವರನ್ನು ಅನರ್ಹಗೊಳಿಸಿ, ಎರಡನೇ ಸ್ಥಾನ ಗಳಿಸಿದ್ದ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು.
ಹೆಚ್ಚು ಮತಗಳನ್ನು ತಿರಸ್ಕರಿಸಿರುವ ಬಗ್ಗೆ ರಕ್ಷಾ ಅವರು ವರಿಷ್ಠರಿಗೆ ದೂರು ನೀಡಿದ್ದು, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಕಾರಣಕ್ಕೆ ನಲಪಾಡ್ ಅವರನ್ನು ಫಲಿತಾಂಶದ ಬಳಿಕ ಅನರ್ಹಗೊಳಿಸಲಾಗಿತ್ತು.