ನವದೆಹಲಿ, ಜು. 01(DaijiworldNews/HR): ಭಾರತದಲ್ಲಿ ತಯಾರಿಸಿದ ಲಸಿಕೆಗಳನ್ನು ಸೇರಿಸಲು ನಿರಾಕರಿಸುತ್ತಿರುವ ಐರೋಪ್ಯ ಒಕ್ಕೂಟದ ನಡೆ ಭಾರತಕ್ಕೆ ತೀವ್ರ ಅಸಮಾಧಾನ ಮೂಡಿಸಿದ್ದು, ತನ್ನ ಲಸಿಕೆಗಳನ್ನು ಒಪ್ಪದ ಒಕ್ಕೂಟಕ್ಕೆ ಪ್ರತಿಯಾಗಿ ಎದಿರೇಟು ನೀಡಲು ಭಾರತ ಮುಂದಾಗಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಭಾರತದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಪ್ರಮಾಣಪತ್ರಗಳನ್ನು ಐರೋಪ್ಯ ಒಕ್ಕೂಟ ಒಪ್ಪಿಕೊಳ್ಳದಿದ್ದಲ್ಲಿ ಅವರ ಪ್ರಮಾಣಪತ್ರಗಳನ್ನೂ ದೇಶದಲ್ಲಿ ಒಪ್ಪಿಕೊಳ್ಳುವುದಿಲ್ಲ ಹಾಗೂ ಅವರು ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಡ್ಡಾಯ ಕ್ವಾರೆಂಟೈನ್ ನಿಯಮ ಪಾಲಿಸಬೇಕು. ತನ್ನ ಡಿಜಿಟಲ್ ಕೊರೊನಾ ಪ್ರಮಾಣಪತ್ರಗಳಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ಪರಿಗಣಿಸಬೇಕು ಎಂದು ಐರೋಪ್ಯ ಒಕ್ಕೂಟಕ್ಕೆ ಭಾರತ ಆಗ್ರಹಿಸಿದೆ ಎನ್ನಲಾಗಿದೆ.
ಇನ್ನು ನೂತನ 'ಗ್ರೀನ್ ಪಾಸ್' ಯೋಜನೆಯಡಿ, ಕೋವಿಶೀಲ್ಡ್ ಲಸಿಕೆ ಪಡೆದ ಜನರಿಗೆ ಐರೋಪ್ಯ ಒಕ್ಕೂಟದ ಸದಸ್ಯ ದೇಶಗಳಿಗೆ ಪ್ರಯಾಣಿಸಲು ಅನುಮತಿ ನೀಡುವ ಸಾಧ್ಯತೆ ಇಲ್ಲ. ಯುರೋಪಿಯನ್ ಔಷಧೀಯ ಸಂಸ್ಥೆ ಅನುಮೋದಿಸಿದ ಲಸಿಕೆಗಳನ್ನು ಪಡೆದವರಿಗೆ ಮಾತ್ರವೇ ಯುರೋಪಿಯನ್ ದೇಶಗಳು ತಮ್ಮೊಳಗೆ ಬರಲು ಅವಕಾಶ ನೀಡುತ್ತಿವೆ. ಫೈಜರ್, ಮಾಡೆರ್ನಾ, ಆಸ್ಟ್ರಾಜೆನಿಕಾ ಮತ್ತು ಜಾನ್ಸೆನ್ ಲಸಿಕೆಗಳು ಇದರಲ್ಲಿ ಸೇರಿದ್ದು, ಆಸ್ಟ್ರಾಜೆನಿಕಾ ಸಂಸ್ಥೆಯದ್ದೇ ಆದರೂ ಅದರ ಭಾರತೀಯ ಆವೃತ್ತಿಯಾಗಿರುವ ಕೋವಿಶೀಲ್ಡ್ಗೆ ಇನ್ನೂ ಅನುಮತಿ ನೀಡಿಲ್ಲ.
ಕೊರೊನಾ ಲಸಿಕೆಯ ಅನುಮೋದನೆ ಪ್ರಕ್ರಿಯೆಯು ಅದರದ್ದೇ ಆದ ಮಾನದಂಡಗಳಿಗೆ ಅನುಗುಣವಾಗಿ ನಡೆಯಲಿದೆ ಎಂಬುದಾಗಿ ಭಾರತದಲ್ಲಿನ ಐರೋಪ್ಯ ಒಕ್ಕೂಟದ ರಾಯಭಾರಿ ತಿಳಿಸಿದ್ದಾರೆ.
ಕೋವಿಶೀಲ್ಡ್ ತಯಾರಕ, ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ತನ್ನ ಯುರೋಪಿಯನ್ ಪಾಲುದಾರ ಆಸ್ಟ್ರಾಜೆನಿಕಾ ಮೂಲಕವೇ ಒಕ್ಕೂಟದ ಅನುಮೋದನೆಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದೆ.