ಮಡಿಕೇರಿ, ಜು 01 (DaijiworldNews/PY): ಸೀರೆಯನ್ನು ಮೇಲ್ಛಾವಣಿಗೆ ಕಟ್ಟಿ ಜೋಕಾಲಿ ಆಡುತ್ತಿದ್ದ ವೇಳೆ ಸೀರೆ ಕೊರಳಿಗೆ ಸುತ್ತಿಕೊಂಡು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಗಣಗೂರು ಉಂಜಿಗನಗಹಳ್ಳಿಯಲ್ಲಿ ನಡೆದಿದೆ.
ಮೃತ ಮಕ್ಕಳನ್ನು ಉಂಜಿಗನಗಹಳ್ಳಿಯ ನಿವಾಸಿಗಳಾದ ರಾಜು ಹಾಗೂ ಜಯಂತಿ ದಂಪತಿಯ ಮಕ್ಕಳಾದ ಮುನಿಷ್ಕಾ (14) ಹಾಗೂ ಪೂರ್ಣೇಶ್ (12) ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಈ ಅವಘಡ ನಡೆದಿದೆ. ಸೀರೆಯಿಂದ ಜೋಕಾಲಿ ಕಟ್ಟಿ ಆಡುತ್ತಿದ್ದ ವೇಳೆ ಆಕಸ್ಮಿಕವಾಗಿ ಸೀರೆ ಕೊರಳಿಗೆ ಸುತ್ತಿಕೊಂಡಿದ್ದು, ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದ ಮಕ್ಕಳ ಅಜ್ಜ ರಾಮಣ್ಣ ಅವರು ಮನೆಗೆ ಬಂದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಅವರು ಸೀರೆಯನ್ನು ಬಿಚ್ಚಿ ಮಕ್ಕಳನ್ನು ಕೆಳಕ್ಕೆ ಇಳಿಸಿದ್ದಾರೆ. ಆದರೆ, ಆ ವೇಳೆ ಮಕ್ಕಳು ಸಾವನ್ನಪ್ಪಿದ್ದರು.
ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.