ಬೆಂಗಳೂರು, ಜು 01 (DaijiworldNews/MS): ಕೋವಿಡ್-19ರ ಸೋಂಕಿನಿಂದಾಗಿ 2021-22ನೇ ಸಾಲಿನ ಭೌತಿಕ ತರಗತಿಗಳು ಸ್ಥಗಿತಗೊಂಡಿದ್ದು, ಹೀಗೆ ಮುಂದುವರಿದರೆ ಶಿಕ್ಷಣ ವಂಚಿತ ಮಕ್ಕಳ ಸಂಖ್ಯೆ, ಬಾಲ ಕಾರ್ಮಿಕರು, ಬಾಲ್ಯ ವಿವಾಹಗಳು ಹೆಚ್ಚಾಗಬಹುದು. ಹೀಗಾಗಿ ಶೀಘ್ರ ವಿಕೇಂದ್ರಿಕೃತ ವ್ಯವಸ್ಥೆಯಡಿ ಭೌತಿಕ ತರಗತಿ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ದೂರದರ್ಶನ ಚಂದನ ವಾಹಿನಿಯಲ್ಲಿ ಜು. 5ರಿಂದ ಸಂವೇದಾ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮಗಳು ಆರಂಭವಾಗಲಿವೆ. ಇದಲ್ಲದೆ ವಿಕೇಂದ್ರಿಕೃತ ವ್ಯವಸ್ಥೆಯಲ್ಲಿ ತರಗತಿ ಆರಂಭಿಸಲು ಸಲಹೆ ತಜ್ಞರು ನೀಡಿದ್ದಾರೆ. ಕಲಿಕಾ ಅಂತರ ನಿವಾರಣೆಗಾಗಿ ಭೌತಿಕ ತರಗತಿ ಆರಂಭಿಸುವುದು ಅಗತ್ಯವಾಗಿದೆ. ಓದು, ಬರಹ ಮತ್ತು ಗಣಿತಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ
ಸಂವೇದಾ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮವನ್ನು ನಿಗದಿತ ತರಗತಿಯ ವಿದ್ಯಾರ್ಥಿಗಳು ವೀಕ್ಷಿಸುವಂತೆ ಕ್ರಮ ಕೈಗೊಂಡು ಶಿಕ್ಷಕರು ನಂತರ ಪ್ರತಿಯೊಬ್ಬ ವಿದ್ಯಾರ್ಥಿಯ ಮೌಲ್ಯಮಾಪನ ವಿವರಗಳನ್ನು ನಿರ್ವಹಿಸಲಿದ್ದಾರೆಂದು ಹೇಳಿದ್ದಾರೆ.