ಬೆಂಗಳೂರು, ಜೂ 30 (DaijiworldNews/PY): ರಾಜ್ಯ ಕಾಂಗ್ರೆಸ್ನಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಆಯ್ಕೆ ಸ್ಥಾನಕ್ಕೆ ಗೊಂದಲ ಮುಂದುವರಿದಿದ್ದು, ಈ ವಿಚಾರದ ಬಗ್ಗೆ ವಿಪಕ್ಷ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಈ ವಿಚಾರದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದೆ. ಭಿನ್ನಾಭಿಪ್ರಾಯಗಳನ್ನೆಲ್ಲಾ ನಿವಾರಿಸಿ ಪಕ್ಷ ಸಂಘಟನೆ ಮಾಡಿ ಮುಂಬರುವ ಚುನಾವಣೆ ಸಿದ್ದರಾಗಿ ಎಂದು ಹೇಳಿದರೂ ಅದನ್ನು ಕೇಳದೇ ತಮ್ಮ ನೇರಕ್ಕೆ ಯೋಚನೆ ಮಾಡುತ್ತಿರುವ ರಾಜ್ಯ ನಾಯಕರ ಬಗ್ಗೆ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆ ಜುಲೈ 4ರಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ರಕ್ಷಾ ರಾಮಯ್ಯ ಹಾಗೂ ಮಹಮ್ಮದ್ ನಲಪಾಡ್ ಬಣಗಳ ಮಧ್ಯೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಲಾಟೆ ನಡೆಯುತ್ತಲೇ ಇದೆ. ಈ ವಿಚಾರ ಈಗ ಬಹಿರಂಗವಾಗಿದ್ದು, ತಾರಕಕ್ಕೇರಿದೆ. ಸಿದ್ದರಾಮಯ್ಯ ರಕ್ಷಾ ರಾಮಯ್ಯ ಪರ ಇದ್ದರೆ, ಡಿಕೆಶಿ ಅವರು ಮೊಹಮ್ಮದ್ ನಲಪಾಡ್ ಪರ ಇದ್ದಾರೆ.
ಡಿ.ಕೆ ಶಿವಕುಮಾರ್ ಅವರು ರಕ್ಷಾ ರಾಮಯ್ಯ ಅವರನ್ನು ತಮ್ಮ ನಿವಾಸಕ್ಕೆ ಕರೆಸಿ ಮಾತನಾಡಿದ್ದು, ನಿಮ್ಮ ಹಾಗೂ ನಲಪಾಡ್ ನಡುವೆ 50:50 ಫಾರ್ಮಲಾದಲ್ಲಿ ಅಧಿಕಾರ ಹಂಚಿಕೊಳ್ಳಿ ಎಂದು ಹೇಳಿದ್ದರಂತೆ. ನಾನು ಸಹ ನಿಮ್ಮ ಹಾಗೂ ಪಕ್ಷದ ಪರ ಕೆಲಸ ಮಾಡುತ್ತಿದ್ದು, ನೀವೆ ಹೀಗೇಕೆ ತಾರತಮ್ಯ ಮಾಡುತ್ತೀರಿ ಎಂದು ರಕ್ಷಾ ರಾಮಯ್ಯ ಪ್ರಶ್ನಿಸಿದ್ದಾರೆ.
ರಕ್ಷಾ ರಾಮಯ್ಯ ಅವರ ತಂದೆ ಮಾಜಿ ಸಚಿವ ಎಂ ಆರ್ ಸೀತಾರಾಂ ಅವರು ಮಂಗಳವಾರ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿದ್ದು, ಈ ವೇಳೆ ಸಿದ್ದರಾಮಯ್ಯ ಅವರು ವಿವರ ಪಡೆದುಕೊಂಡು ದೆಹಲಿಯಲ್ಲಿನ ರಾಹುಲ್ ಗಾಂಧಿ ಅವರ ಕಚೇರಿಗೆ ಕರೆ ಮಾಡಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.