ನವದೆಹಲಿ, ಜೂ 30 (DaijiworldNews/PY): ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, "ಜನರು ಸಾರ್ವಜನಿಕ ಸಾರಿಗೆಗಾಗಿ ಸುದೀರ್ಘ ಸಮಯ ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು ಮಾತ್ರ ಕೊರೊನಾ ನಿಬಂಧನೆಗಳಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಪರಿಣಾಮ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಜನರು ಸಾರ್ವಜನಿಕ ಸಾರಿಗೆಗಾಗಿ ದೀರ್ಘ ಸರತಿ ಸಾಲುಗಳು ಕೇವಲ ಕೊರೊನಾ ನಿಬಂಧನೆಗಳಿಂದಾಗಿ ಅಲ್ಲ. ನಿಜವಾದ ಕಾರಣ ತಿಳಿಯಲು ನಿಮ್ಮ ನಗರದ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನೋಡಿ" ಎಂದಿದ್ದಾರೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಅವರು TaxExtortion ಎನ್ನುವ ಹ್ಯಾಶ್ ಟ್ಯಾಗ್ ಅನ್ನು ಉಲ್ಲೇಖಿಸಿದ್ದಾರೆ.
ದೆಹಲಿಯ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ರೈಲಿಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿರುವ ವಿಚಾರದ ಬಗ್ಗೆ ವರದಿಗಳು ಬಂದ ನಂತರ ಈ ಬಗ್ಗೆ ರಾಹುಲ್ ಗಾಂಧಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರವು, ಅಬಕಾರಿ ಸುಂಕ ಸೇರಿದಂತೆ ಪೆಟ್ರೋಲ್ ಹಾಗೂ ಡೀಸೆಕ್ ಮೇಲಿನ ತೆರಿಗೆಗಳ ಮೂಲಕ ನೂರಾರು ಕೋಟಿ ವಸೂಲಿ ಮಾಡುತ್ತಿದ್ದು, ಈ ಕಾರಣದಿಂದ ಇಂಧನ ಬೆಲೆಗಳು ಗಗನಕ್ಕೇರುತ್ತಿವೆ. ದೇಶದ ಹಲವು ಕಡೆಗಳಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 100 ರೂ. ನ ಗಡಿ ದಾಟಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಲೇ ಬಂದಿದೆ.