ನವದೆಹಲಿ, ಜೂ 30 (DaijiworldNews/PY): ದೇಶದಲ್ಲಿ ಕೊರೊನಾ ಸೋಂಕು ಪ್ರಕರಣ ಸಂಖ್ಯೆ ಇಳಿಕೆಯಾಗುತ್ತಿದೆ. ಈ ನಡುವೆ ಕೊರೊನಾದ ಮೂರನೇ ಅಲೆಯ ಆತಂಕವೂ ಇದೆ. ಈ ಎಲ್ಲಾ ಕಾರಣದಿಂದ ಭಾರತಕ್ಕೆ ಆಗಮಿಸುವ ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ಡಿಜಿಸಿಎ ಜುಲೈ 31ರವರೆಗೆ ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದು, "ಭಾರತದಿಂದ ಹೊರಡುವ ನಿಗದಿತ ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಮೇಲಿನ ನಿರ್ಬಂಧಗಳನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ಭಾರತಕ್ಕೆ ಆಗಮಿಸುವ ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಸರಕು ಸಾಗಾಟ ವಿಮಾನ ಹಾಗೂ ಆಯ್ದ ದೇಶಗಳೊಂದಿಗಿನ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ವಿಮಾನ ಸಂಚಾರ ಎಂದಿನಂತೆ ಮುಂದುವರಿಯಲಿದೆ" ಎಂದು ನಾಗರಿಕ ವಿಮಾನಯಾನ ಕಾವಲು ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.
"ಕೊರೊನಾ ಪ್ರಕರಣಗಳ ಆಧಾರದ ಮೇಲೆ ಆಯ್ದ ಮಾರ್ಗಗಳಲ್ಲಿ ನಿಗದಿತ ಅಂತರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಬಹುದು" ಎಂದು ತಿಳಿಸಿದೆ.
ಕೊರೊನಾ ಸೋಂಕು ವ್ಯಾಪಿಸಲು ಪ್ರಾರಂಭವಾದ ನಂತರ 2020ರ ಮಾರ್ಚ್ 23ರಿಂದ ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ರದ್ದುಪಡಿಸಲಾಗಿತ್ತು.