ನವದೆಹಲಿ, ಜೂ 30 (DaijiworldNews/MS): ಭಾರತದಲ್ಲಿ ಕೊರೊನಾದಿಂದ ಬಲಿಯಾದವರಿಗೆ ಕೃಪಾನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ ನೀಡಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ಪೀಠ ಈ ಸಂಬಂಧ ಮಹತ್ವದ ಆದೇಶ ನೀಡಿದ್ದು, ಕೊರೊನಾದಿಂದ ಮೃತಪಟ್ಟ ಕುಟುಂಬಸ್ಥರಿಗೆ ಕೃಪಾನುದಾನ ಪರಿಹಾರ ನೀಡುವಂತೆ ಸೂಚನೆ ನೀಡಿದ್ದು, ಈ ಕುರಿತು ಮಾರ್ಗಸೂಚಿಗಳನ್ನು 6 ತಿಂಗಳೊಳಗೆ ಜಾರಿಗೆ ತರಬೇಕು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಎನ್ಡಿಎಂಎ) ಸೂಚನೆ ನೀಡಿದೆ.
" ಪರಿಹಾರದ ಕನಿಷ್ಠ ಮಾನದಂಡಗಳ ಪ್ರಕಾರ ಕೋವಿಡ್ಗೆ ಬಲಿಯಾದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಪರಿಹಾರಕ್ಕಾಗಿ ಮಾರ್ಗಸೂಚಿಗಳನ್ನು ರೂಪಿಸಲು ನಾವು ಎನ್ಡಿಎಂಎಗೆ ನಿರ್ದೇಶಿಸುತ್ತೇವೆ. ಒದಗಿಸಬೇಕಾದ ಸಮಂಜಸವಾದ ಮೊತ್ತವನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿವೇಚನೆಗೆ ಬಿಟ್ಟಿದ್ದು " ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಪರಿಹಾರ ಪಡೆಯುವ ಸಲುವಾಗಿ ಸಲ್ಲಿಸುವ " ಮರಣ ಪ್ರಮಾಣಪತ್ರದಲ್ಲಿ ಸಾವಿನ ದಿನಾಂಕ ಮತ್ತು ಕೊವೀಡ್ ಕಾರಣ ನಮೂದಾಗಿರಬೇಕು" ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಕುಟುಂಬವು ತೃಪ್ತರಾಗದಿದ್ದರೆ ಸಾವಿನ ಕಾರಣವನ್ನು ಸರಿಪಡಿಸುವ ಸೌಲಭ್ಯವೂ ಇರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.