ಶ್ರೀನಗರ, ಜೂ.29 (DaijiworldNews/HR): ಯೋಧರು ಎರಡು ಡ್ರೋನ್ ಗಳನ್ನು ಹಿಮ್ಮೆಟ್ಟಿಸಿದ ದಿನದ ಬಳಿಕ ಈಗ ಮತ್ತೊಂದು ಡ್ರೋನ್ ಪತ್ತೆಯಾಗಿದ್ದು, ಅದು ಸುಂಜ್ವಾನ್ ಸೇನಾ ನೆಲೆಯ ಬಳಿ ಡ್ರೋನ್ ಹಾರಾಟ ನಡೆದಿದೆ ಎಂದು ತಿಳಿದು ಬಂದಿದೆ.
ಈ ಡ್ರೋನ್ ಮುಂಜಾನೆ 2.30 ರ ಸುಮಾರಿಗೆ ಕುಂಜ್ವಾನಿ, ಸುಂಜ್ವಾನ್ ಮತ್ತು ಕಲುಚಕ್ ಪ್ರದೇಶದಲ್ಲಿ ಪತ್ತೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಅವುಗಳು ನಾಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಜಮ್ಮು ನಗರ ಮತ್ತು ಸತ್ವಾರಿ ವಾಯುಪಡೆ ನಿಲ್ದಾಣದ ಸಮೀಪದಲ್ಲಿರುವ ಕುಂಜ್ವಾನಿ ಪ್ರದೇಶವು, ಸುಂಜ್ವಾನ್ನಿಂದ 6.5 ಕಿ.ಮೀ ಮತ್ತು ಕಲುಚಕ್ನಿಂದ 4.5 ಕಿ.ಮೀ ದೂರದಲ್ಲಿದೆ.
ಕಳೆದ ಮೂರು ದಿನಗಳಿಂದ ಮಿಲಿಟರಿ ನೆಲೆಯ ಬಳಿ ಸತತವಾಗಿ ಡ್ರೋನ್ ಹಾರಾಟ ನಡೆಯುತ್ತಿದ್ದು, ಮೂರು ದಿನದಲ್ಲಿ ಒಟ್ಟು ಐದು ಡ್ರೋನ್ ಹಾರಾಟ ಪತ್ತೆಯಾಗಿದೆ.
ಸೋಮವಾರ ಕಲುಚಕ್ ಮಿಲಿಟರಿ ಬೇಸ್ ಬಳಿ ಎರಡು ಡ್ರೋನ್ ಗಳು ಪತ್ತೆಯಾಗಿದ್ದು, ಸೇನಾ ನೆಲೆಯೊಳಗೆ ಒಂದು ಡ್ರೋನ್ ರಾತ್ರಿ 11: 45 ಕ್ಕೆ ಮತ್ತು ಇನ್ನೊಂದು ಬೆಳಿಗ್ಗೆ 2:40 ಕ್ಕೆ ಹಾರುತ್ತಿರುವುದು ಕಂಡುಬಂದಿದೆ.