ಬೆಂಗಳೂರು, ಜೂ 29 (DaijiworldNews/MS): "ಶಿಕ್ಷಣ ಸಚಿವ ಎಸ್. ಸುರೆಶ್ ಕುಮಾರ್ ಅವರು ಪೂರ್ವಭಾವಿಯಾಗಿ ನನ್ನೊಂದಿಗೆ ಚರ್ಚಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮೂಲಕ ತಿಳಿಸಿದ್ದು ಈ ಮೂಲಕ ಎಸೆಸೆಲ್ಸಿ ಪರೀಕ್ಷೆಯ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಆರೋಗ್ಯ ಸಚಿವ ಸುಧಾಕರ್ ನಡುವಿನ ಜಟಾಪಟಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸೋಮವಾರ ಎಸೆಸೆಲ್ಸಿ ಪರೀಕ್ಷೆಯ ದಿನಾಂಕ ಪ್ರಕಟಿಸಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಶಿಕ್ಷಣ ಸಚಿವರ ನಿರ್ಧಾರವೇ ನಮಗೆ ಗೊತ್ತಿಲ್ಲ, ನನ್ನ ಜೊತೆ ಮಾತನಾಡಿಲ್ಲ ಎಂದು ಹೇಳಿದ್ದರು. ಅದಕ್ಕೆ ಮತ್ತೆ ಉತ್ತರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆರೋಗ್ಯ ಇಲಾಖೆ ಸಲಹೆ ಮತ್ತು ಸಿಎಂ ಮೌಖಿಕ ಒಪ್ಪಿಗೆ ಪಡೆದು ಪರೀಕ್ಷಾ ದಿನಾಂಕ ಘೋಷಣೆ ಮಾಡಲಾಗಿದೆ ಎಂದು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದರು.
ಶಾಲಾರಂಭದ ಬಗ್ಗೆ ಮಾತನಾಡಿ ಮಕ್ಕಳ ಆರೋಗ್ಯ ಮುಖ್ಯ ಎಂದು ಪರೀಕ್ಷೆ ಬಗ್ಗೆಯೂ ಪರೋಕ್ಷವಾಗಿಯೇ ಡಾ. ಕೆ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ನಡುವೆ ಸಚಿವ ಸುರೇಶ್ ಕುಮಾರ್ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಕೂಗೂ ಕೇಳಿಬಂದಿದ್ದು. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಶಿಕ್ಷಣ ಸಚಿವ ಸುರೇಶ್ ಕುಮಾರ್’ರವರು ಪೂರ್ವಭಾವಿಯಾಗಿ ನನ್ನೊಂದಿಗೆ ಚರ್ಚಿಸಿ, ಎಸೆಸೆಲ್ಸಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಚರ್ಚಿಸಿದ ನಂತರವೇ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಇದು ಏಕಪಕ್ಷೀಯ ತೀರ್ಮಾನವಲ್ಲ. ಈ ಬಗ್ಗೆ ಗೊಂದಲ ಸೃಷ್ಟಿಸುವುದು ಅನಗತ್ಯ ಎಂದಿದ್ದಾರೆ.