ನವದೆಹಲಿ, ಜೂ.29 (DaijiworldNews/HR): ಭಾರತದ ತಪ್ಪು ನಕ್ಷೆಯನ್ನು ತೋರಿಸಿದ್ದಕ್ಕಾಗಿ ಟ್ವಿಟರ್ ಭಾರತದ ಎಂಡಿ ಮನೀಶ್ ಮಹೇಶ್ವರಿ ಅವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭಾರತದ ತಪ್ಪು ನಕ್ಷೆಯನ್ನು ತನ್ನ ವೆಬ್ ಸೈಟ್ ನಲ್ಲಿ ತೋರಿಸಿದ್ದಕ್ಕಾಗಿ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 505 (2) ಮತ್ತು ಐಟಿ (ತಿದ್ದುಪಡಿ) ಕಾಯ್ದೆ 2008 ರ ಸೆಕ್ಷನ್ 74 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ದೂರನ್ನು ಬುಲಂದ್ ಶಹರ್ನಲ್ಲಿ ಬಜರಂಗದಳದ ನಾಯಕರೊಬ್ಬರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಭಾರತದ ವಿವಾದಾತ್ಮಕ ನಕ್ಷೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಇದು ಈ ಹಿಂದೆ ಟ್ವಿಟರ್ ವೆಬ್ ಸೈಟ್ ನ ವೃತ್ತಿ ವಿಭಾಗದಲ್ಲಿ 'ಟ್ವೀಪ್ ಲೈಫ್' ಶೀರ್ಷಿಕೆಯಅಡಿಯಲ್ಲಿ ಕಾಣಿಸಿಕೊಂಡಿತು.
ಇನ್ನು ಈ ತಿಂಗಳು ಮನೀಶ್ ವಿರುದ್ಧದ ಎರಡನೇ ಎಫ್ ಐಆರ್ ಇದಾಗಿದ್ದು, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಪ್ರತ್ಯೇಕ ದೇಶವೆಂದು ತೋರಿಸುವ ಭಾರತದ ವಿಕೃತ ನಕ್ಷೆಯನ್ನು ಪ್ರದರ್ಶಿಸುವ ಬಗ್ಗೆ ಅಪಸ್ವರ ತೆಗೆದ ನಂತರ, ಟ್ವಿಟರ್ ಈಗ ತಪ್ಪು ನಕ್ಷೆಯನ್ನು ತೆಗೆದುಹಾಕಿದೆ.