ನವದೆಹಲಿ, ಜೂ 29 (DaijiworldNews/MS): ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ( ಡಿಆರ್ ಡಿಓ) ಅಭಿವೃದ್ದಿ ಪಡಿಸಿರುವ ಕೊರೊನಾ ಔಷಧಿ 2-DG (2-ಡಿ-ಆಕ್ಸಿ-ಡಿ-ಗ್ಲುಕೋಸ್ ) ವಾಣಿಜ್ಯಾತ್ಮಕವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೈದರಾಬಾದ್ ಮೂಲದ ಡಾ. ರೆಡ್ಡಿಸ್ ಲ್ಯಾಬ್ ಸೋಮವಾರ ಘೋಷಿಸಿದೆ. ಈ ಔಷಧಿಯನ್ನು ದೇಶಾದ್ಯಂತ ಇರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲಾಗುವುದು.
ಈ ಕುರಿತು ಕಂಪನಿ ಹೊರಡಿಸಿರುವ ಒಂದು ಹೇಳಿಕೆಯ ಪ್ರಕಾರ ಮೊದಲು ಈ ಔಷಧಿಯನ್ನು ಮೆಟ್ರೋ ನಗರಗಳು ಹಾಗೂ ಒಂದನೇ ಸ್ತರದ ನಗರಗಳಲ್ಲಿ ಪೂರೈಕೆ ಮಾಡಲಾಗುವುದು ಬಳಿಕ ಉಳಿದೆಡೆಗೂ ಪೂರೈಸಲಿದೆಯೆಂದು ಕಂಪನಿ ಹೇಳಿದೆ. ಈ ಔಷಧಿಯ ಒಂದು ಸ್ಯಾಚೆಟ್ ಬೆಲೆ ರೂ.990 ನಿಗದಿಪಡಿಸಲಾಗಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಿಗೆ ಇದನ್ನು ಕಡಿಮೆ ಬೆಲೆಯಲ್ಲಿ ಪೂರೈಸಲಾಗುತ್ತಿದೆ.
ಈ ಔಷಧವನ್ನು ಎಲ್ಲರೂ ಪಡೆಯುವಂತಿಲ್ಲ. ವೈದ್ಯರು ಔಷಧಿಯನ್ನು ಬರೆದುಕೊಟ್ಟರೆ ಮಾತ್ರ ಪಡೆಯಬೇಕು. ವೈದ್ಯರ ಶರಾ ಇಲ್ಲದೇ ಈ ಔಷಧಿಯನ್ನು ಯಾರಿಗೂ ನೀಡುವಂತಿಲ್ಲ. ಕೋವಿಡ್-19 ರೋಗಕ್ಕೆ ತುತ್ತಾಗಿದ್ದರೆ, ತುರ್ತು ಸಂದರ್ಭದಲ್ಲಿ ವೈದ್ಯರು ಸೂಚಿಸಿದರೆ ಮಾತ್ರ 2-ಡಿಜಿ ಪಡೆಯಬಹುದಾಗಿದೆ ಎಂದು ಡಿಆರ್ಡಿಒ ತಿಳಿಸಿದೆ.
ಇದೇ ವರ್ಷದ ಮೇ 1ರಂದು 2-ಡಿಜಿ ಓರಲ್ ಡ್ರಗ್ನ ತುರ್ತು ಪರಿಸ್ಥಿತಿ ಬಳಕೆಗೆ ಅನುಮತಿ ನೀಡಲಾಗಿತ್ತು.