ಬೆಂಗಳೂರು, ಜೂ. 28 (DaijiworldNews/SM): ರಾಜ್ಯದಲ್ಲಿ ಸದ್ಯ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಈ ನಡುವೆ ಸೋಂಕು ಸಂಪೂರ್ಣ ಹತೋಟಿಗೆ ತರಲು ಸರಕಾರ ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರಿಗೆ ರೂಲ್ಸ್ ಮತ್ತಷ್ಟು ಟೈಟ್ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳು ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಅಲ್ಲಿಂದ ರಾಜ್ಯಕ್ಕೆ ಆಗಮಿಸುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಎಂದು ರಾಜ್ಯ ಸರಕಾರ ಘೊಷಿಸಿದೆ. ಈ ನಡುವೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿಲ್ಲದೇ ಇದ್ದಲ್ಲಿ, 2 ಡೋಸ್ ಲಸಿಕೆ ಪಡೆದುಕೊಂಡಿರಬೇಕು. ಇದರ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕೆಂದು ಸರಕಾರ ಸ್ಪಷ್ಟಪಡಿಸಿದೆ.
ಇನ್ನು 2 ಡೋಸ್ ಲಸಿಕೆ ಪಡೆದುಕೊಂಡ ಬಳಿಕ ಪ್ರಯಾಣದ ಸಂದರ್ಭದಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಅಂತಹವರಿಗೆ, ರ್ಯಾಂಡಮ್ ಪರೀಕ್ಷೆಗೆ ಸರಕಾರ ಸೂಚಿಸಿದೆ. ಹಾಗೂ ಈ ಪರೀಕ್ಷೆಯಲ್ಲಿ ನೆಗೆಟಿವ್ ಬಂದಲ್ಲಿ ಮಾತ್ರವೇ ಸಂಚಾರಕ್ಕೆ ಅನುವು ಮಾಡಲಾಗುವುದೆಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.