ಬೆಂಗಳೂರು, ಜೂ 28 (DaijiworldNews/PY): "ಬಿಜೆಪಿ ರಾಜ್ಯದ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತಾಡುವುದು ಆನೆಯ ಮುಂದೆ ಶ್ವಾನ ಕೂಗಿದಂತೆ. ನಮ್ಮಲ್ಲಿ ಯಾರನ್ನೂ ನಿಯಂತ್ರಿಸುವ ಅಗತ್ಯವಿಲ್ಲ. ನಿಮಗೆ ಅದರ ಅಗತ್ಯವಿದೆ" ಎಂದು ಕಾಂಗ್ರೆಸ್ ಬಿಜೆಪಿ ವಿರುದ್ದ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಯತ್ನಾಳ್, "ಬೆಲ್ಲದ್, ಯೋಗೇಶ್ವರ್ರನ್ನು ನಿಯಂತ್ರಿಸಲಾಗದ ಸರ್ಕಸ್ಸಿನ ಬಫ್ಯೂನ್ ಪಾತ್ರದಾರಿಯಂತಿರುವ ನಳಿನ್ ಕುಮಾರ್ ಕಟೀಲ್ ಅವರನ್ನ ಅಧ್ಯಕ್ಷನನ್ನಾಗಿ ಪಡೆದ ಬಿಜೆಪಿ ರಾಜ್ಯದ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತಾಡುವುದು ಆನೆಯ ಮುಂದೆ ಶ್ವಾನ ಕೂಗಿದಂತೆ. ನಮ್ಮಲ್ಲಿ ಯಾರನ್ನೂ ನಿಯಂತ್ರಿಸುವ ಅಗತ್ಯವಿಲ್ಲ. ನಿಮಗೆ ಅದರ ಅಗತ್ಯವಿದೆ" ಎಂದಿದೆ.
"ಕರೋನಾ, ಡೆಲ್ಟಾ, ಡೆಲ್ಟಾ ಪ್ಲಸ್, ಬ್ಲಾಕ್ ಫಂಗಸ್ ಎಲ್ಲಾ ಸೋಂಕಿಗಿಂತ ಅಪಾಯಕಾರಿ ಸೋಂಕು ಎಂದರೆ ಅದು ಬಿಜೆಪಿ ಪಕ್ಷ. ಹಲವು ಸೋಂಕುಗಳ ಬಗ್ಗೆ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ, ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ, ಆಡಳಿತ ಪಕ್ಷದ ಹೊಣೆಗಾರಿಕೆ ಮರೆತು ಕಾಂಗ್ರೆಸ್ಸಿಗರ ಮನೆಯ ಕಿಟಕಿ ಇಣುಕುವ ದುರ್ಬುದ್ಧಿ ಬಿಜೆಪಿ ಬಿಡಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದೆ.
"ದುರ್ಬಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಈಗ ಸಿದ್ದರಾಮಯ್ಯ ಬೆಂಬಲಿಗರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಮೂಲ ಕಾಂಗ್ರೆಸ್ ನಾಯಕರು ಕೂಡಾ ತಮ್ಮ ದಾಳ ಉರುಳಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಈಗ ದಿನಕ್ಕೊಬ್ಬರಂತೆ ಮುಖ್ಯಮಂತ್ರಿ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ" ಎಂದು ಬಿಜೆಪಿ ಟ್ವೀಟ್ ಮಾಡಿತ್ತು.
"ಕಾಂಗ್ರೆಸ್ ಪಕ್ಷದೊಳಗಿನ ಒಳಜಗಳ ಈಗ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಒಟ್ಟಾಗುತ್ತಿದ್ದಾರೆ. ಮುನಿಯಪ್ಪ ಅವರ ಮನೆಯಲ್ಲಿ ನಡೆದ ಗೌಪ್ಯ ಸಭೆಯೇ ಅದಕ್ಕೆ ಸಾಕ್ಷಿಯಾಗಿದೆ. ಉಸ್ತುವಾರಿ ಸುರ್ಜೆವಾಲ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ" ಎಂದಿತ್ತು.