ನವದೆಹಲಿ, ಜೂ 28 (DaijiworldNews/PY): ಕೊರೊನಾ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ಹಾಗೂ ಆರೋಗ್ಯ ವಲಯಕ್ಕೆ 50,000 ಕೋಟಿ ರೂ. ಮೌಲ್ಯದ ಸಾಲ ಖಾತರಿ ಯೋಜನೆಯನ್ನು ಸೋಮವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ.
"ಸುಮಾರು ಎಂಟು ಆರ್ಥಿಕ ಪರಿಹಾರ ಕ್ರಮಗಳನ್ನು ನಾವು ಘೋಷಿಸುತ್ತಿದ್ದೇವೆ. ಈ ಪೈಕಿ ನಾಲ್ಕು ಸಂಪೂರ್ಣವಾಗಿ ಹೊಸದು ಹಾಗೂ ಆರೋಗ್ಯ ಮೂಲಸೌಕರ್ಯಕ್ಕೆ ನಿರ್ದಿಷ್ಟವಾಗಿದೆ. ಕೊರೊನಾ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ.ಗಳ ಸಾಲ ಖಾತರಿ ಯೋಜನೆ ಹಾಗೂ ಆರೋಗ್ಯ ವಲಯಕ್ಕೆ 50,000 ಕೋಟಿ ರೂ. ಗಳನ್ನು ನೀಡಲಾಗಿದೆ. ಒಟ್ಟು ಮೊತ್ತದ ಪೈಕಿ ಆರೋಗ್ಯ ವಲಯಕ್ಕೆ 50,000 ಕೋಟಿ ರೂ. ಹಾಗೂ ಕೊರೊನಾ ಬಾಧಿತ ಇತರ ವಲಯಗಳಿಗೆ 60,000 ಕೋಟಿ ರೂ. ನೀಡಲಾಗುವುದು" ಎಂದು ತಿಳಿಸಿದರು.
"25 ಲಕ್ಷ ಮಂದಿಗೆ ಹೊಸ ಯೋಜನೆಯಾದ ಸಾಲ ಖಾತರಿ ಯೋಜನೆಯಡಿ ಸೌಲಭ್ಯ ಒದಗಿಸಬೇಕು. ಮೈಕ್ರೋಫೈನಾನ್ಸ್ ಸಂಸ್ಥೆಗಳು ಅತಿ ಸಣ್ಣ ಸಾಲಗಾರರಿಗೆ ಸಾಲ ನೀಡಬೇಕು. ಸಾಲ ನೀಡಲು ಗರಿಷ್ಠ 1.25 ಲಕ್ಷ ರೂ. ಹೊಸ ಸಾಲ ನೀಡುವಿಕೆಯ ಮೇಲೆ ಗಮನಹರಿಸಲಾಗಿದ್ದು, ಹಳೆಯ ಮರು ಸಾಲಗಳ ಮರುಪಾವತಿಯ ಮೇಲೆ ಅಲ್ಲ" ಎಂದರು.
"ಹೊಸ ಸಾಲ ಖಾತರಿ ಯೋಜನೆಯಡಿ ಬಡ್ಡಿ ದರವು ಆರ್ಬಿಐ ನಿಗದಿತ ದರಕ್ಕಿಂತ ಶೇ.2ರಷ್ಟು ಕಡಿಮೆಯಿದ್ದು, ಮೂರು ವರ್ಷಗಳ ಸಾಲದ ಅವಧಿ ಇದೆ. ಹೊಸ ಸಾಲಗಳ ಮೇಲೆ ಗಮನಹರಿಸಬೇಕು. ಸಣ್ಣ ಪಟ್ಟಣಗಳು ಸೇರಿದಂತೆ ಒಳನಾಡಿನ ಸಣ್ಣ ಸಾಲಗಾರರನ್ನು ಕೂಡಾ ಹೊಸ ಸಾಲ ಖಾತರಿ ಯೋಜನೆ ತಲುಪಲಿದೆ" ಎಂದು ಹೇಳಿದರು.
"11 ಸಾವಿರ ನೋಂದಾಯಿತ ಟೂರಿಸ್ಟ್ ಗೈಡ್ಗಳಿಗೆ ಸಾಲದ ನೆರವು ನೀಡಲಾಗುವುದು. ರಾಜ್ಯಮಟ್ಟದಲ್ಲಿ ನೋಂದಾಯಿತ ಗೈಡ್ಗಳಿಗೆ ಸಾಲ ನೀಡಲಾಗುವುದು. 10 ಲಕ್ಷದವರೆಗೆ ಟೂರಿಸ್ಟ್ ಗೈಡ್ಗಳಿಗೆ ಸಾಲ ನೀಡಲಾಗುವುದು" ಎಂದು ತಿಳಿಸಿದರು.
"ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಯೋಜನೆ ಜಾರಿ ಮಾಡಲಾಗುತ್ತಿದ್ದು, ಮೈಕ್ರೋ ಫೈನಾನ್ಸ್ ಮೂಲಕ 25 ಲಕ್ಷ ಮಂದಿಗೆ ನೆರವು ನೀಡಲಾಗುವುದು. ಬ್ಯಾಂಕ್ಯೇತರ ಹಣಕಾಸು ಸಂಸ್ಥೆ ಮೂಲಕ 2ರ ಬಡ್ಡಿದರದಲ್ಲಿ ತಲಾ 1.25 ಲಕ್ಷ ಸಾಲ ನೀಡಲಾಗುವುದು. ಮೂರು ವರ್ಷದೊಳಗೆ ಸಾಲ ಮರುಪಾವತಿಗೆ ಅವಕಾಶ ಮಾಡಿಕೊಡಲಾಗುವುದು" ಎಂದು ಹೇಳಿದರು.
"2022 ಮಾರ್ಚ್ 31ರವರೆಗೆ ಆತ್ಮನಿರ್ಭರ್ ಭಾರತ್ ರೋಜ್ಗರ್ ಯೋಜನೆಯನ್ನು ವಿಸ್ತರಿಸಲಾಗುವುದು. ಇನ್ನು ಮುಂದೆ 15 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ಪಿಎಫ್ ನೀಡುತ್ತೇವೆ" ಎಂದು ತಿಳಿಸಿದರು.