ಹುಬ್ಬಳ್ಳಿ, ಜೂ 28 (DaijiworldNews/PY): "ಕಾಸರಗೋಡು ಜಿಲ್ಲೆಯ ಊರುಗಳ ಕನ್ನಡ ಹೆಸರಿನ ಬದಲಾವಣೆ ವಿಚಾರದ ಬಗ್ಗೆ ಹೆಚ್ಚಿ ಮಾಹಿತಿ ಸಂಗ್ರಹಿಸಲಿದ್ದು, ಅವುಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತರುತ್ತೇನೆ" ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಸರಗೋಡು ಜಿಲ್ಲೆಯ ಊರುಗಳ ಕನ್ನಡ ಹೆಸರಿನ ಬದಲಾವಣೆ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತಂದಲ್ಲಿ, ಅವರು ಕೇರಳ ರಾಜ್ಯ ಸರ್ಕಾರಕ್ಕೆ ಸೂಕ್ತವಾದ ನಿರ್ದೇಶನ ನೀಡಲಿದ್ದಾರೆ" ಎಂದು ಹೇಳಿದರು.
"ಪ್ರಸ್ತುತ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಹಾಗಾಗಿ. ಅಧಿಕಾರಕ್ಕೆ ನಾಯಕರ ನಡುವೆ ಪೈಪೋಟಿ ಸಾಮಾನ್ಯ. ಆದರೆ, ಅಧಿಕಾರ ಇಲ್ಲದಿದ್ದರೂ ಕೂಡಾ ಕಾಂಗ್ರೆಸ್ ಪಕ್ಷದಲ್ಲಿ ಖುರ್ಚಿಗಾಗಿ ಬಡಿದಾಡಿಕೊಳ್ಳುತ್ತಿರುವುದು ಹಾಸ್ಯಾಸ್ಪದ" ಎಂದು ಲೇವಡಿ ಮಾಡಿದರು.
ಕಾಸರಗೋಡಿನ ಕನ್ನಡ ಗ್ರಾಮಗಳ ಹೆಸರು ಬದಲಾವಣೆ ವಿಚಾರಣೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಂಸದ ನಳಿನ್ ಕುಮಾರ್ ಕಟೀಲ್, "ಕಾಸರಗೋಡು ಜಿಲ್ಲೆಯ ಮಂಜೇಶ್ವರ ಒಳಗೊಂಡು ಬಹುತೇಕ ಪ್ರದೇಶಗಳ ಹೆಸರನ್ನು ಮಲಯಾಳೀಕರಣಗೊಳಿಸುವ ಕೇರಳ ಸರ್ಕಾರದ ನಿರ್ಧಾರದಿಂದ ಆ ಭಾಗದ ಜನರ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಕೇರಳದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಪಿಣರಾಯಿ ವಿಜಯನ್ ಅವರ ಈ ತೀರ್ಮಾನವನ್ನು ಮರುಪರಿಶೀಲಿಸಬೇಕು ಮತ್ತು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸುತ್ತೇನೆ" ಎಂದು ಹೇಳಿದ್ದಾರೆ.