ಬಾಗಲಕೋಟೆ, ಜೂ 28 (DaijiworldNews/PY): "ರಮೇಶ್ ಜಾರಕಿಹೊಳಿ ಅವರು ಇನ್ನೂ ಎರಡು ವರ್ಷ ಶಾಸಕರಾಗಿರುತ್ತಾರೆ. ಪ್ರಸಂಗ ಬಂದರೆ ಅವರು ಮಂತ್ರಿ ಆಗುತ್ತಾರೆ. ನಮ್ಮೆಲ್ಲಾ ಮಂತ್ರಿ ಮಂಡಲದ ಪ್ರಯತ್ನ ಅದೇ ಆಗಿರುತ್ತದೆ" ಎಂದು ಸಚಿವ ಉಮೇಶ್ ಕತ್ತಿ ಸ್ಫೋಟಕವಾದ ಹೇಳಿಕ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, "34 ಮಂತ್ರಿಗಳನ್ನು ಬಿಟ್ಟು ಮಾಡುವುದಕ್ಕೆ ಸಾಧ್ಯವಿಲ್ಲ. ಅದರಲ್ಲಿ ಫಿಟ್ ಮಾಡುವ ಯತ್ನ ಮಾಡುತ್ತೇವೆ. ರಮೇಶ್ ಜಾರಕಿಹೊಳಿ ಅವರು ಇನ್ನೂ ಎರಡು ವರ್ಷ ಶಾಸಕರಾಗಿರಲಿದ್ದು, ಪ್ರಸಂಗ ಬಂದರೆ ಅವರು ಮಂತ್ರಿಯಾಗುತ್ತಾರೆ" ಎಂದಿದ್ದಾರೆ.
"ಶಾಸಕ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಬರುವುದಿಲ್ಲ. ಅವರು ನನ್ನಷ್ಟೇ ವಯಸ್ಸಿನವರು. ಅವರು ನನ್ನ ಆತ್ಮೀಯ ಸ್ನೇಹಿತರಾಗಿದ್ದು, ನಾನು ಅವರೊಂದಿಗೆ ಮಾತನಾಡುತ್ತಿರುತ್ತೇನೆ. ರಮೇಶ್ ಜಾರಕಿಹೊಳಿಗೆ ಮತ್ತೆ ಮಂತ್ರಿ ಸ್ಥಾನ ನೀಡುವುದು ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಚಾರ. ಕ್ಯಾಸೆಟ್ಗಳನ್ನು ತಯಾರಿಸಿದ್ದಾರೆ. ಈ ವಿಚಾರವಾಗಿ ಅವರಿಗೆ ನೋವಾಗಿದೆ" ಎಂದು ತಿಳಿಸಿದ್ದಾರೆ.
ಶಾಲೆ ಆರಂಭದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಜುಲೈ ತಿಂಗಳೊಳಗೆ ಶಾಲೆಗಳು ಪ್ರಾರಂಭವಾಗಬಹುದು. ಮೂರನೇ ಅಲೆ ಯಾವಾಗ ಬರುತ್ತೋ ತಿಳಿದಿಲ್ಲ. ಮಕ್ಕಳ ವಿದ್ಯಾಭ್ಯಾಸವೂ ನಡೆಯಬೇಕು. ಇದರೊಂದಿಗೆ ವ್ಯಾಪಾರ, ಉದ್ಯೋಗ ಕೂಡಾ ನಡೆಯಬೇಕು. ಅಲ್ಲದೇ, ಇದರ ಜೊತೆ ನಾವು ಬದುಕಬೇಕು ಎನ್ನುವುದನ್ನು ನೀವು ನಾವು ತೀರ್ಮಾನಿಸಬೇಕು" ಎಂದು ಹೇಳಿದ್ದಾರೆ.
ದೇವಾಲಯ ಆರಂಭದ ಬಗ್ಗೆ ಮಾತನಾಡಿದ ಅವರು, "ದೇವಾಲಯ ಆರಂಭದ ಬಗ್ಗೆ ಬಹುತೇಕ ರಾಜ್ಯವೇ ಅನ್ಲಾಕ್ ಆಗಿದೆ. ಹಂತ ಹಂತವಾಗಿ ಅನ್ಲಾಕ್ ಮಾಡುತ್ತಾರೆ. ಹಲವು ದಿನಗಳಿಂದ ದೇವಾಲಯಗಳು ಲಾಕ್ ಆಗಿವೆ. ಏಕಾಏಕಿ ದೇವಾಲಯದ ಬಾಗಿಲು ತೆರೆದಲ್ಲಿ ಜನ ದಟ್ಟಣೆ ಆಗುತ್ತದೆ. ಈ ರೀತಿ ಆಗಬಾರದು ಎಂದು ಕ್ರಮೇಣ ಮಾಡುತ್ತಾರೆ. ಇನ್ನು ಎಂಟು ದಿನಗಳಲ್ಲಿ ದೇವಾಲಯ ತೆರೆಯಲಿದೆ" ಎಂದಿದ್ದಾರೆ.
ಈ ವೇಳೆ ಎಸ್. ಆರ್ ಪಾಟೀಲ್ಗೆ ತಿರುಗೇಟು ನೀಡಿದ ಅವರು, "ಕಾಂಗ್ರೆಸ್ನಲ್ಲಿ ಮೊದಲು ಸರಿಮಾಡಿ. ಆಮೇಲೆ ಬಿಜೆಪಿ ವಿಚಾರವಾಗಿ ಮಾತನಾಡಿ. ನೀವು ವಿರೋಧ ಪಕ್ಷದ ನಾಯಕರಿದ್ದೀರಿ, ಸಿದ್ದರಾಮಯ್ಯ ಅವರೋ, ಡಿಕೆಶಿ ಅವರೋ ದಲಿತ ಮುಖ್ಯಮಂತ್ರಿ ಎನ್ನುವುದನ್ನು ಮೊದಲು ನಿರ್ಧರಿಸಿ" ಎಂದು ಹೇಳಿದ್ದಾರೆ.