ತಿರುವನಂತಪುರ, ಜೂ.28 (DaijiworldNews/HR): ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಮಾತಿಗೆ ತಕ್ಕಂತೆ ರಸ್ತೆ ಬದಿಯಲ್ಲಿ ಲಿಂಬೆ ಶರಬತ್ತು, ಐಸ್ ಕ್ರೀಮ್ ಮಾರುತ್ತಿದ್ದ ಕೇರಳದ ಯುವತಿಯೋರ್ವಲು ಈಗ ಪೊಲೀಸ್ ಇನ್ಸ್ ಪೆಕ್ಟರ್ ಆಗುರುವುದೇ ಸಾಕ್ಷಿ.
ಕೇರಳದ ವರ್ಕಲಾ ನಗರದ ನಿವಾಸಿ ಅಯನಿ ಶಿವ ಎಂಬ ಯುವತಿಗೆ 18 ವರ್ಷಕ್ಕೆ ಮದುವೆಯಾಗಿ ಬಳಿಕ ಗಂಡನಿಂದ, ಮನೆಯವರಿಂದ ದೂರವಾಗಿ, ಹೊಟ್ಟೆ ಪಾಡಿಗಾಗಿ ವರ್ಕಲಾದಲ್ಲಿ ಲಿಂಬೆ ಶರಬತ್ತು, ಐಸ್ ಕ್ರೀಮ್ ಮಾರುತ್ತಿದ್ದು, ಇದೀಗ ವರ್ಕಲಾ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದಾಳೆ.
ಆಯನಿಗೆ ಈಗ 31 ವರ್ಷ. ಈಕೆ ಕಾಂಜಿರಾಮ್ಕುಲಂ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ಓದುವ ಸಮಯದಲ್ಲಿ ತನ್ನ ಮನೆಯವರ ವಿರೋಧ ಕಟ್ಟಿಕೊಂಡು ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಿದ್ದರು. ಆದರೆ ಒಂದು ಮಗುವಾದ ಬಳಿಕ ಗಂಡ ದೂರವಾಗಿದ್ದ. ಬಳಿಕ ಮನೆಗೆ ಮರಳಲು ಪ್ರಯತ್ನಿಸಿದರೂ, ಕುಟುಂಬವು ಅವಳನ್ನು ಸ್ವೀಕರಿಸಲಿಲ್ಲ. ತನ್ನ ಆರು ತಿಂಗಳ ಮಗ ಶಿವಸೂರ್ಯನೊಂದಿಗೆ ಅಜ್ಜಿಯ ಮನೆಯಲ್ಲಿ ಶೆಡ್ ಒಂದರಲ್ಲಿ ಕೆಲ ಸಮಯ ಉಳಿದುಕೊಂಡಿದ್ದು, ಆ ಬಳಿಕ ಕೆಲಸ ಮಾಡಬೇಕೆಂದು ಅಲ್ಲಿಂದ ವರ್ಕಲಾಗೆ ತೆರಳಿದ್ದಳು.
ಇನ್ನು ವರ್ಕಲಾ ಶಿವಗಿರಿ ಆಶ್ರಮದ ಸ್ಟಾಲ್ಗಳಲ್ಲಿ ನಿಂಬೆ ಶರಬತ್ತು, ಐಸ್ಕ್ರೀಮ್, ಕೈಯಿಂದ ತಯಾರಿಸಿದ ಕರಕುಶಲ ವಸ್ತುಗಳಿಗೆ ಮಾರಾಟ ಮಾಡುವಂತಹ ಅನೇಕ ಸಣ್ಣ ಉದ್ಯಮಗಳನ್ನು ಪ್ರಯತ್ನಿಸಿದ್ದು, ಇದೆಲ್ಲವೂ ವಿಫಲವಾಯಿತು. ನಾನು ಯಾವಾಗಲೂ ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾಗಬೇಕೆಂದು ಬಯಸಿದ್ದೆ. ಆದರೆ ಹಣೆಯಲ್ಲಿ ಬೇರೆಯದೆ ಬರೆದಿತ್ತು. ಆದರೆ ಒಬ್ಬ ವ್ಯಕ್ತಿಯು ಪೊಲೀಸ್ ಪರೀಕ್ಷೆಗೆ ಕಲಿಯಲು ಮತ್ತು ಬರೆಯಲು ಸೂಚಿಸಿ ಹಣಕಾಸಿನ ಸಹಾಯ ಮಾಡಿದ್ದಾರೆ ಎಂದು ಆಯನಿ ಹೇಳಿದ್ದಾರೆ.
ಕೇರಳ ಪೊಲೀಸರು ಆಯನಿ ಶಿವಗೆ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದು, "ಈಕೆ ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸದ ನಿಜವಾದ ಮಾದರಿಯಾಗಿದ್ದು, ಪತಿ ಮತ್ತು ಕುಟುಂಬದಿಂದ ದೂರವಾಗಿ 6 ತಿಂಗಳ ಮಗುವಿನೊಂದಿಗೆ ಬೀದಿಗೆ ಬಿದ್ದ 18 ವರ್ಷದ ಬಾಲಕಿಯೊಬ್ಬಳು ಈಗ ವರ್ಕಲಾ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದಾಳೆ" ಎಂದು ಹೇಳಿದ್ದಾರೆ.