ಬೆಂಗಳೂರು, ಜೂ 28 (DaijiworldNews/MS): ವಿಧಾನ ಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿದೆ. ಹೀಗಿರುವಾಗಲೇ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಬಿರುಕಿಗೆ ಕಾರಣವಾಗಿರುವ ನಡುವೆ , ಬಿಜೆಪಿ ಪಕ್ಷವೂ ಕಾಂಗ್ರೆಸ್ ನ ಕಾಳೆಲೆದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿಯೂ " ಕಾಂಗ್ರೆಸ್ ಪಕ್ಷದೊಳಗಿನ ಒಳಜಗಳ ಈಗ ಮತ್ತೊಂದು ಸ್ವರೂಪ ಪಡೆದುಕೊಂಡಿದೆ.ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಒಟ್ಟಾಗುತ್ತಿದ್ದಾರೆ. ಮುನಿಯಪ್ಪ ಅವರ ಮನೆಯಲ್ಲಿ ನಡೆದ ಗೌಪ್ಯ ಸಭೆಯೇ ಅದಕ್ಕೆ ಸಾಕ್ಷಿಯಾಗಿದೆ.ಉಸ್ತುವಾರಿ ಸುರ್ಜೆವಾಲ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ ಎಂದು ವ್ಯಂಗವಾಡಿದೆ.
ಕಾಂಗ್ರೆಸ್ ಪಕ್ಷದಲ್ಲಿ ಅರಾಜಕತೆ ಎಷ್ಟಿದೆ ಎಂದರೆ, ಇರೋದು 68 ಶಾಸಕರು, ಆದರೆ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಗಳು ಮಾತ್ರ ನೂರಕ್ಕೂ ಅಧಿಕ!!! ರಾಜ್ಯ ಕಾಂಗ್ರೆಸ್ ಪಕ್ಷದ ಅಧಿಕೃತ ಮೂಲದಿಂದಲೇ ನೂರಕ್ಕೂ ಹೆಚ್ಚು ಜನ ಸಿಎಂ ಕುರ್ಚಿಯ ಆಕಾಂಕ್ಷಿಗಳು ನಮ್ಮಲ್ಲಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗುತ್ತಿದೆ! ಎಂದು ಟಾಂಗ್ ನೀಡಿದೆ.
"ಡಿ. ಕೆ. ಶಿವಕುಮಾರ್ ಸಿಎಂ ಆಗಿದ್ದರೆ ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ಬರುತಿತ್ತು" ಎಂದು ಕಳೆದ ತಿಂಗಳು ಕರ್ನಾಟಕ ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವಿಟ್ ಆದ ಬಳಿಕ ಕಾಂಗ್ರೆಸ್ ನಾಯಕರೆಲ್ಲರೂ ಎಚ್ಚೆತ್ತುಕೊಂಡಿದ್ದು ತಮ್ಮ ತಮ್ಮ ನಾಯಕರುಗಳ ಪರ ಬ್ಯಾಟ್ ಬೀಸುತ್ತಿದ್ದಾರೆ.