ನವದೆಹಲಿ,ಜೂ.28 (DaijiworldNews/HR): ಭಾರತದಲ್ಲಿ ಆಗಸ್ಟ್ನಿಂದ ಡಿಸೆಂಬರ್ ಅವಧಿಯಲ್ಲಿ ಒಟ್ಟು 135 ಕೋಟಿ ಕೊರೊನಾ ಡೋಸ್ ಲಸಿಕೆಗಳು ಭಾರತದಲ್ಲಿ ಲಭ್ಯವಿರಲಿದ್ದು, ವರ್ಷಾಂತ್ಯದಲ್ಲಿ ದೇಶದ ಎಲ್ಲ ಅರ್ಹ ಜನಸಂಖ್ಯೆಗೂ ಪೂರ್ಣ ಪ್ರಮಾಣದಲ್ಲಿ ಲಸಿಕೆ ಒದಗಿಸಿದಂತಾಗಲಿದೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿ ಈ ವಿಚಾರಗಳನ್ನು ತಿಳಿಸಿದೆ.
ಸಾಂಧರ್ಭಿಕ ಚಿತ್ರ
18 ವರ್ಷ ಮೇಲ್ಪಟ್ಟ ಸುಮಾರು 93-94 ಕೋಟಿ ಮಂದಿಗೆ ಲಸಿಕೆ ನೀಡಬೇಕಾಗುತ್ತದೆ. ಎಲ್ಲರಿಗೂ ಎರಡು ಕೊರೊನಾ ಡೋಸ್ ಲಸಿಕೆ ನೀಡಲು ಸುಮಾರು 186.6 ಕೋಟಿ ಡೋಸ್ ಲಸಿಕೆ ಬೇಕಾಗುತ್ತದೆ. ಜುಲೈ 31ರವರೆಗೆ 51.6 ಕೋಟಿ ಡೋಸ್ ಗಳ ನೀಡಿಕೆ ಪೂರ್ಣಗೊಳ್ಳಲಿದ್ದು, ಉಳಿದ 135 ಕೋಟಿ ಡೋಸ್ ಗಳನ್ನು ಆಗಸ್ಟ್ನಿಂದ ಡಿಸೆಂಬರ್ ಅವಧಿಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ಸರಕಾರ ಹೇಳಿದೆ.
"ಇದೇ ವೇಳೆ, ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಭಾರತದ ಅತ್ಲೀಟ್ ಗಳು, ಕ್ರೀಡಾಳುಗಳು ಮತ್ತು ಸಂಬಂಧಪಟ್ಟ ಸಿಬಂದಿಗೆ, ವಿದೇಶಗಳಿಗೆ ಉದ್ಯೋಗ ನಿಮಿತ್ತ ತೆರಳುವವರು, ವ್ಯಾಸಂಗಕ್ಕೆಂದು ಹೋಗುವ ವಿದ್ಯಾರ್ಥಿಗಳಿಗೆ ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ಗಳ ನಡುವಿನ ಅಂತರವನ್ನು ತಗ್ಗಿಸಲಾಗಿದೆ. ಅಂಥವರು ಮೊದಲ ಡೋಸ್ ಪಡೆದ 28 ದಿನಗಳಲ್ಲೇ(ಗರಿಷ್ಠ 84 ದಿನಗಳು) ಎರಡನೇ ಡೋಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದೂ ಸರಕಾರ ಮಾಹಿತಿ ನೀಡಿದೆ.
ಇನ್ನು 32.3 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡುವ ಮೂಲಕ ಅಮೇರಿಕಾವನ್ನು ಹಿಂದಿಕ್ಕಿ ಭಾರತವು ಹೊಸ ದಾಖಲೆ ನಿರ್ಮಿಸಿದೆ ಎನ್ನಲಾಗಿದೆ.