ಬೆಂಗಳೂರು, ಜೂ 28 (DaijiworldNews/PY): ಛಲವಾದಿಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕದಿರೇಶ್ ಸಹೋದರಿ ಮಾಲಾ ಮತ್ತು ಆಕೆಯ ಪುತ್ರ ಅರುಳ್ನನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಮಾಸ್ಟರ್ ಮೈಂಡ್ ಕ್ಯಾಪ್ಟನ್ ಅಲಿಯಾಸ್ ಸೆಂಥಿಲ್ಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.
"ಮಾಲಾ, ರೇಖಾ ಅವರ ಪತಿ ಕದಿರೇಶ್ ಅವರ ಅಕ್ಕ. ಹತ್ಯೆಗೈದ ವ್ಯಕ್ತಿಗಳು ತಾಯಿ ಹಾಗೂ ಮಗನೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದ್ದು, ಈ ಕಾರಣದಿಂದ ಅವರನ್ನು ಬಂಧಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
"ರೇಖಾ ವಿರುದ್ದ ಪೀಟರ್ ದ್ವೇಷ ಸಾಧಿಸುತ್ತಿದ್ದ ಎನ್ನಲಾಗಿದೆ. ಕದಿರೇಶ್ಗೆ ಪೀಟರ್ ಹತ್ತಿರವಾಗಿದ್ದನು. ಕದಿರೇಶ್ ಹತ್ಯೆಯ ಬಳಿಕ ಪೀಟರ್ಗೆ ರೇಖಾ ಯಾವುದೇ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಅಲ್ಲದೇ, ಹಲವು ಬಾರಿ ಅವಮಾನಿಸಿದ್ದರು. ಈ ಹಿನ್ನೆಲೆ ರೇಖಾಳನ್ನು ಪೀಟರ್ ದ್ವೇಷಿಸಲು ಆರಂಭಿಸಿದ್ದನು. ಈ ಸಂದರ್ಭ ಇತರ ಆರೋಪಿಗಳನ್ನು ಸಂಪರ್ಕಿಸಿ ಆತನೊಂದಿಗೆ ರೇಖಾ ಹೇಗೆ ವರ್ತಿಸುತ್ತಿದ್ದಾನೆ ಹಾಗೂ ರೇಖಾ ಬೆಳೆಯುತ್ತುರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ. ಹತ್ಯೆಗೆ ವೈಯುಕ್ತಿಕ ಪೈಪೋಟಿ ಹಾಗೂ ಅಸೂಯೆ ಕಾರಣ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಸದ್ಯ ಸೆಂಥಿಲ್ ಸೇರಿ ಇತರೆ ಮೂವರು ಆರೋಪಿಗಳಿಗಾಗಿ ಶೋಧ ಮುಂದುವರಿದೆ ಎಂದು ಮೂಲಗಳು ತಿಳಿಸಿವೆ.