ಪುಲ್ವಾಮಾ, ಜೂ 28 (DaijiworldNews/MS): ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾನುವಾರ ತಡರಾತ್ರಿ ಪೊಲೀಸ್ ವಿಶೇಷಾಧಿಕಾರಿಯೊಬ್ಬರ ಮನೆಗೆ ನುಗ್ಗಿದ ಭಯೋತ್ಪಾದಕರು ಗುಂಡು ಹಾರಿಸಿ, ಅಧಿಕಾರಿ ಹಾಗೂ ಅವರ ಪತ್ನಿಯನ್ನು ಹತ್ಯೆ ಮಾಡಿದ್ದು, ಘಟನೆಯಲ್ಲಿ ಮಗಳು ಗಾಯಗೊಂಡಿದ್ದಾರೆ.
ಮೃತ ಅಧಿಕಾರಿಯನ್ನು ವಿಶೇಷ ಪೊಲೀಸ್ ಅಧಿಕಾರಿ (ಎಸ್ಪಿಒ) ಫಯಾಜ್ ಅಹ್ಮದ್ ಎಂದು ಪೊಲೀಸರು ಗುರುತಿಸಿದ್ದಾರೆ. ಫಯಾಜ್ ಅಹ್ಮದ್ ಅವರ ಮನೆಗೆ ರಾತ್ರಿ ಸುಮಾರು 11 ಗಂಟೆಗೆ ನುಗ್ಗಿದ ಭಯೋತ್ಪಾದಕರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿಅಧಿಕಾರಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, ಅವರ ಪತ್ನಿ ರಜಾ ಬೇಗಮ್ ಮತ್ತು ಮಗಳು ಗಂಭೀರ ಗಾಯಗೊಂಡಿದ್ದುಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಧಿಕಾರಿ ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮಗಳಿಗೆ ರಫಿಯಾ ಚಿಕಿತ್ಸೆ ಮುಂದುವರಿದಿದೆ ಎಂದು ಅವಂತಿಪೋರಾ ಪೊಲೀಸ್ ನಿಯಂತ್ರಣ ಕೊಠಡಿಯ ಉಸ್ತುವಾರಿ ಅಧಿಕಾರಿ ವಿವರಿಸಿದ್ದಾರೆ.
ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದಿದ್ದು, ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜಮ್ಮುವಿನ ವಾಯ ಪಡೆ ನಿಲ್ದಾಣದ ಮೇಲೆ ದಾಳಿ ನಡೆದ ದಿನವೇ ಈ ಘಟನೆ ನಡೆದಿದೆ.