ನವದೆಹಲಿ, ಜೂ. 27 (DaijiworldNews/SM): ದೇಶದಲ್ಲಿ ಸದ್ಯ ಲಸಿಕೆ ವಿತರಣೆ ವೇಗಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಯಾರೂ ಕೂಡ ಲಸಿಕೆ ಪಡೆಯಲು ಹಿಂಜರೆಯಬಾರದು. ಧೈರ್ಯವಾಗಿ ಲಸಿಕೆ ಪಡೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಸ್ತುತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ನಾವು ದೇಶವಾಸಿಗಳು ಕೊರೋನಾ ವಿರುದ್ಧ ಹೋರಾಡುತ್ತಿದ್ದೇವೆ. ಈ ಹೋರಾಟದಲ್ಲಿ ನಾವು ಒಟ್ಟಾಗಿ ಅನೇಕ ಅಸಾಧಾರಣ ಮೈಲಿಗಲ್ಲನ್ನು ಸಾಧಿಸಿದ್ದೇವೆ. ಯಶಸ್ಸಿನ ಶಿಖರ ತಲುಪಲು ಎಲ್ಲರೂ ಲಸಿಕೆ ಪಡೆಯಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೆ ಸಾರ್ವಜನಿಕರು ಲಸಿಕೆಯ ಬಗ್ಗೆ ಭಯಗೊಳ್ಳುವುದು ಬೇಡ. ಧೈರ್ಯವಾಗಿ ಲಸಿಕೆ ಪಡೆಯಿರಿ ಎಂದು ಮೋದಿ ವಿನಂತಿಸಿಕೊಂಡಿದ್ದಾರೆ.
ಲಸಿಕೆ ಹಾಕಿಸಿದ ಬಳಿಕ ಕೆಲವೊಮ್ಮೆ ಜನರಿಗೆ ಜ್ವರ ಬರಬಹುದು. ಆದರೆ, ಅದು ತುಂಬಾ ಸೌಮ್ಯವಾಗಿರುತ್ತದೆ. ಕೆಲವೇ ಗಂಟೆಗಳವರೆಗೆ ಇರುತ್ತದೆ. ಲಸಿಕೆಯನ್ನು ತಪ್ಪಿಸುವುದು ತುಂಬಾ ಅಪಾಯಕಾರಿ ಎಂದು ಪ್ರಧಾನಿ ಎಚ್ಚರಿಸಿದ್ದಾರೆ.