ನವದೆಹಲಿ, ಜೂ.27 (DaijiworldNews/HR): 'ಹಿಂಜರಿಕೆ ಇಲ್ಲದೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು' ಎಂಬ ನರೇಂದ್ರ ಮೋದಿ ಅವರ ಮಾತಿನಿಂದ ಪ್ರೇರಣೆ ಪಡೆದ ಮಧ್ಯಪ್ರದೇಶದ ದುಲಾರಿಯಾ ಎಂಬ ಹಳ್ಳಿಯ ವ್ಯಕ್ತಿ ಮತ್ತು ಆತನ ಕುಟುಂಬಸ್ಥರು ಭಾನುವಾರ ಲಸಿಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಜನರನ್ನು ಹಿಂಜರಿಕೆಯಿಂದ ಹೊರತಂದು ಲಸಿಕೆ ಪಡೆಯುವಂತೆ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ದುಲಾರಿಯಾ ಗ್ರಾಮದ ಹಳ್ಳಿ ಜನರೊಂದಿಗೆ ಇತ್ತೀಚೆಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.
ಇನ್ನು ಪ್ರಧಾನ ಮಂತ್ರಿಯ ಮಾಸಿಕ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ದೂರವಾಣಿ ಸಂಭಾಷಣೆಯನ್ನು ಪ್ರಸಾರ ಮಾಡಲಾಯಿತು.
ಲಸಿಕೆ ಅಭಿಯಾನದ ಬಗ್ಗೆ ಮಧ್ಯಪ್ರದೇಶದ ದುಲಾರಿಯಾ ಗ್ರಾಮಸ್ಥರಿಗೆ ಇರುವ ಅನುಮಾನಗಳನ್ನು ಬಗೆಹರಿಸುವ ಪ್ರಯತ್ನ ನಡೆಸಿದ ಪ್ರಧಾನಿ ಮೋದಿ, ಲಸಿಕೆ ಪಡೆಯುವಂತೆ ಸಲಹೆ ನೀಡಿದ್ದಾರೆ.
ಇನ್ನು ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿದ ಬಳಿಕ ನಾನು ಮತ್ತು ನನ್ನ ಕುಟುಂಬ ಸದಸ್ಯರು ಶನಿವಾರ ಕೊರೊನಾ ಲಸಿಕೆ ಪಡೆದಿದ್ದೇವೆ, ಜೊತೆಗೆ ಲಸಿಕೆ ಪಡೆಯುವಂತೆ ನಾನು ಇತರ ಗ್ರಾಮಸ್ಥರನ್ನೂ ಪ್ರೋತ್ಸಾಹಿಸಿದ್ದು, ಗ್ರಾಮದ 127 ಜನರಿಗೆ ಲಸಿಕೆ ಕೊಡಿಸಲಾಗಿದೆ,’ ಎಂದು ರಾಜೇಶ್ ಹಿರವೆ ಹೇಳಿದ್ದಾರೆ.