ನವದೆಹಲಿ, ಜೂ 27 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಕಿಡಿಕಾರಿರುವ ರಾಹುಲ್ ಗಾಂಧಿ, "ಮೊದಲು ಲಸಿಕೆ ನೀಡಿ, ಬಳಿಕ ಮನ್ ಕೀ ಬಾತ್ನಲ್ಲಿ ಮಾತನಾಡಿ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ದೇಶದ ಪ್ರತಿಯೊಬ್ಬರಿಗೂ ಮೊದಲು ಕೊರೊನಾ ಲಸಿಕೆ ತಲುಪುವಂತೆ ಮಾಡಿ. ನಂತರ ನಿಮ್ಮ ಮನ್ ಕೀ ಬಾತ್ನಲ್ಲಿ ಮಾತನಾಡಿ" ಎಂದಿದ್ದಾರೆ. ಅಲ್ಲದೇ ಕೊರೊನಾ ಲಸಿಕೆ ಬಗೆಗಿನ ನಿಜಾಂಶ ಎಂದು ಗ್ರಾಫ್ ಚಾರ್ಟ್ವೊಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿರುವ ದತ್ತಾಂಶಗಳನ್ನು ಉಲ್ಲೇಖಿಸಿ ಕೇಂದ್ರದ ವಿರುದ್ದ ಕೆಂಡಕಾರಿದ್ಧಾರೆ.
ಮನ್ ಕೀ ಬಾತ್ ಪ್ರಧಾನಿ ನರೇಂದ್ರ ಮೋದಿ ಅವರ ತಿಂಗಳ ರೇಡಿಯೋ ಕಾರ್ಯಕ್ರಮವಾಗಿದ್ದು, ಪ್ರತೀ ತಿಂಗಳ ಕೊನೆಯ ಭಾನುವಾರ ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ.
ಕೇಂದ್ರ ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಮೊದಲಿನಿಂದಲೂ ರಾಹುಲ್ ಗಾಂಧಿ ಆರೋಪಿಸುತ್ತಿದ್ದಾರೆ. "ಎರಡನೇ ಅಲೆಯಲ್ಲಿ ಸೋಂಕು ನಿಯಂತ್ರಣ ವಿಚಾರವಾಗಿ ಸೂಕ್ತವಾದ ಕ್ರಮ ಕೈಗೊಳ್ಳದಿದ್ದಲ್ಲಿ, ಮೂರನೇ ಅಲೆ ಮತ್ತಷ್ಟು ಭೀಕರವಾಗಿರಲಿದೆ" ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.