ರಾಂಚಿ, ಜೂ.27 (DaijiworldNews/HR): ಅನಾರೋಗ್ಯದಿಂದ ಸಾವನ್ನಪ್ಪಿದ ತಾಯಿಯ ಅಂತ್ಯ ಸಂಸ್ಕಾರ ಮಾಡುವುದಕ್ಕೆ ಹಣವಿಲ್ಲವೆಂದು ಮಗನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಿಯೋಘರ್ ಜಿಲ್ಲೆಯ ಜಾಸಿಡಿಹ್ ಪೊಲೀಸ್ ಠಾಣೆ ಪ್ರದೇಶದ ಚಾರ್ಕಿ ಪಹಾರಿ ಗ್ರಾಮದಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಕಿಶನ್ ಚೌಧರಿ ಅವರ ತಾಯಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರಂತೆ. ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ ಕಿಶನ್, ಅದಕ್ಕೆಂದು ಸಾಕಷ್ಟು ಖರ್ಚು ಮಾಡಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಕೊನೆಯುಸಿರೆಳೆದಿದ್ದಾಳೆ.
ಇನ್ನು ತಾಯಿಯ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ನಡೆಸಲಾಗುತ್ತಿತ್ತು, ಆದರೆ ಅದಕ್ಕೆ ಬೇಕಾದ ಸಾಮಾಗ್ರಿಗಳನ್ನು ತಂದು ಹಾಕುವುದಕ್ಕೆ ಕಿಶನ್ ಬಳಿ ಹಣವಿರಲಿಲ್ಲವಂತೆ. ಅದಾಗಲೇ ತಾಯಿಯ ಸಾವಿನಿಂದ ನೊಂದಿದ್ದ ಆತ ತನ್ನ ಬಳಿ ಅಂತ್ಯ ಸಂಸ್ಕಾರ ಮಾಡಲೂ ಆಗುತ್ತಿಲ್ಲವೆಂದು ಬೇಸರದಿಂದ ಕೋಣೆಯೊಳಗೆ ಹೋಗಿದ್ದಾನೆ. ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಮೃತನ ಹೆಂಡತಿ ಇದೀಗ ಅತ್ತೆ ಮತ್ತು ಗಂಡನನ್ನು ಕಳೆದುಕೊಂಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.