ಕಾನ್ಪುರ, ಜೂ 27 (DaijiworldNews/PY): "ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನ್ನಂತಹ ಸಾಮಾನ್ಯ ಹುಡುಗನಿಗೆ ದೇಶದ ಅತ್ಯುನ್ನತ ಹುದ್ದೆಯ ಜವಾಬ್ದಾರಿಗಳನ್ನು ನಿರ್ವಹಿಸುವ ಸವಲತ್ತು ಸಿಗುತ್ತದೆ ಎಂದು ನಾನು ಕನಸಿನಲ್ಲೂ ಯೋಚಿಸಿರಲಿಲ್ಲ" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಅವರು ಇಂದು ತಮ್ಮ ಹುಟ್ಟೂರಾದ ಉತ್ತರ ಪ್ರದೇಶದ ಕಾನ್ಪುರದ ದೇಹತ್ ಜಿಲ್ಲೆಯ ಪರಾಂಖ್ ಗ್ರಾಮದಲ್ಲಿ ಅಭಿನಂದನೆ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ನೆಲಕ್ಕೆ ತಲೆಬಾಗಿ ನೆಲಕ್ಕೆ ನಮಸ್ಕರಿಸಿದರು.
ಈ ಸಂದರ್ಭ ಮಾತನಾಡಿದ ಅವರು, "ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನ್ನಂತಹ ಸಾಮಾನ್ಯ ಹುಡುಗ ಇಂದು ದೇಶದ ಅತ್ಯುನ್ನತ ಹುದ್ದೆ ಏರುತ್ತಾನೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸಾಧ್ಯವಾಗಿದೆ" ಎಂದಿದ್ದಾರೆ.
"ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಸಂವಿಧಾನ ರಚಿಸಿದವರಿಗೆ ಅವರ ತ್ಯಾಗ-ಬಲಿದಾನಗಳಿಗೆ ವಂದಿಸುತ್ತೇನೆ. ಈ ಗ್ರಾಮದ ಮಣ್ಣು, ಜನರ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದವೇ ನಾನು ಈ ಉನ್ನುತ ಹುದ್ದೆಗೇರಲು ಕಾರಣ" ಎಂದು ತಿಳಿಸಿದ್ದಾರೆ.